ADVERTISEMENT

ಕನಕಪುರ ಬಂದ್ ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 9:17 IST
Last Updated 29 ಜುಲೈ 2016, 9:17 IST

ಕನಕಪುರ: ಕುಡಿಯುವ ನೀರಿಗಾಗಿ ನೈಸರ್ಗಿಕ ಸಂಪತ್ತು ಬಳಸಿಕೊಳ್ಳುವಲ್ಲಿ ಯಾರ ಅನುಮತಿ ಬೇಕಿಲ್ಲ. ಅದಕ್ಕೆ ಯಾರು ವಿರೋಧಿಸುವಂತಿಲ್ಲ. ಆದರೂ, ಮಹಾದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಿರುದ್ಧವಾಗಿ ತೀರ್ಪು ನೀಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಮಹಾದಾಯಿ ನ್ಯಾಯಾಧಿಕರಣದ ವಿರುದ್ಧ ರಾಜ್ಯ ರೈತ ಸಂಘವು ಕರೆ ನೀಡಿದ್ದ ಕನಕಪುರ ಬಂದ್‌ನಲ್ಲಿ ರೈತಸಂಘದ ಮುಖಂಡರು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆ ಮುಖ್ಯಸ್ಥರು ಪಾಲ್ಗೊಂಡು ತೀರ್ಪಿನ ವಿರುದ್ಧ  ಹರಿಹಾಯ್ದರು.

ಕರ್ನಾಟಕದಲ್ಲಿ ಹುಟ್ಟಿ ಗೋವಾ ಮೂಲಕ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನದಿಯ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಕರ್ನಾಟಕ
ಮುಂದಾಗಿದೆ.  ಇದಕ್ಕೆ ಅವಕಾಶ ಕೊಡದಂತೆ ಗೋವಾ ಸರ್ಕಾರವು ಪ್ರಯತ್ನಿಸಿ ವಿರೋಧ ವ್ಯಕ್ತಪಡಿಸಿ ನ್ಯಾಯಾಂಗ ಹೋರಾಟ ನಡೆಸುತ್ತಿದೆ ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಎಂ.ಜಿ. ರಸ್ತೆ ಮೂಲಕ ಆಶೋಕ ಸ್ತಂಭದ ಚನ್ನಬಸಪ್ಪ ವೃತ್ತದಲ್ಲಿ ಜಮಾವಣೆ ಗೊಂಡು ಮಾನವ ಸರಪಳಿ ನಿರ್ಮಿಸಿ ನ್ಯಾಯ ಮಂಡಳಿ ವಿರುದ್ಧ ಘೋಷಣೆ ಕೂಗಿ  ಸರ್ಕಾರ ವೈಫಲ್ಯ ಅವರು ಖಂಡಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಂಪತ್‌ಕುಮಾರ್‌, ತಾಲ್ಲೂಕು ಅಧ್ಯಕ್ಷ ಮುನಿರಾಜು, ಜಯಕರ್ನಾಟಕ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಎಸ್‌ಪಿ ಮಲ್ಲಿಕಾರ್ಜುನ್‌, ಕರವೇ ಅಂದಾನಿಗೌಡ, ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಜಗದೀಶ್‌, ತಾಲ್ಲೂಕು ಅಧ್ಯಕ್ಷ ಭಾಸ್ಕರ್‌, ಯುವಶಕ್ತಿ ವೇದಿಕೆಯ ಶ್ರೀನಿವಾಸ್‌, ಜಿಲ್ಲಾ ಲೇಖಕರ ವೇದಿಕೆಯ ಕೂ.ಗಿ.ಗಿರಿಯಪ್ಪ, ಘಮಕ ಕಲಾ ಪರಿಸತ್ತಿನ ಎಲ್ಲೇಗೌಡಬೆಸಗರಹಳ್ಳಿ ಸೇರಿದಂತೆ ಬೆಂಬಲ ವ್ಯಕ್ತಪಡಿಸಿದ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಕೀಲರ ಬೆಂಬಲ: ಮಹಾದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟದ ವಿರುದ್ಧವಾಗಿ ತೀರ್ಪು ಬಂದಿದ್ದು ರಾಜ್ಯದ ಜನರಿಗೆ ಅನ್ಯಾಯವಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ನಂಜೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.