ADVERTISEMENT

ಕುಂಟುತ್ತಾ ಸಾಗಿದ ರಸ್ತೆ ಅಭಿವೃದ್ಧಿ ಕಾಮಗಾರಿ

ತಡೆಗೋಡೆ ಇಲ್ಲದ ಕೆರೆ ಏರಿ ರಸ್ತೆಯಿಂದ ಪ್ರಾಣಭಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 6:48 IST
Last Updated 31 ಡಿಸೆಂಬರ್ 2016, 6:48 IST
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಕೆರೆ ಏರಿಯ ರಸ್ತೆಯಲ್ಲಿ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬಗಳು
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಕೆರೆ ಏರಿಯ ರಸ್ತೆಯಲ್ಲಿ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬಗಳು   

ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಕೆರೆ ಏರಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಮೂರು ತಿಂಗಳಿಂದ ಕುಂಟುತ್ತಾ ಸಾಗಿದ್ದು, ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ದಿನನಿತ್ಯ ಪರಿತಾಪ ಎದುರಿಸುತ್ತಿದ್ದಾರೆ.

ಪ್ರತಿದಿನ ನೂರಾರು ವಾಹನಗಳು ಓಡಾಡುವ ಚನ್ನಪಟ್ಟಣ - ಹಲಗೂರು ಮುಖ್ಯ ರಸ್ತೆ ಇದಾಗಿದ್ದು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ₹15 ಕೋಟಿ ಅಂದಾಜು ವೆಚ್ಚದಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅದೇ ಯೋಜನೆಯಡಿ ಕಿರಿದಾಗಿದ್ದ ಕೋಡಂಬಹಳ್ಳಿ ಕೆರೆ ಏರಿ ರಸ್ತೆಯ  ಅಗಲ ಹೆಚ್ಚಿಸಿ ಡಾಂಬರೀಕರಣ ಮಾಡುವ ಉದ್ದೇಶದಿಂದ ಕಾಮಗಾರಿ ಆರಂಭಿಸಿ ಅರ್ಧಂಬರ್ಧ ಕಾಮಗಾರಿ ಮುಗಿಸಲಾಗಿದೆ.

ಕೆರೆ ಏರಿ ರಸ್ತೆಯಲ್ಲಿ ಯಾವುದೇ ತಡೆಗೋಡೆ ಇಲ್ಲದೆ ಪ್ರಯಾಣಿಕರು ಒಂದು ಕಡೆ ಕೆರೆ, ಮತ್ತೊಂದು ಕಡೆ ಇಪ್ಪತ್ತು ಅಡಿಯಷ್ಟು ಆಳದ ಪ್ರಪಾತದ ನಡುವೆ ಪ್ರಾಣಭಯದಿಂದ ಪ್ರಯಾಣಿಸುವಂತಾಗಿದೆ. ಸುಮಾರು 2 ಕಿ.ಮೀ. ಉದ್ದದ ಕೆರೆ ಏರಿ ರಸ್ತೆಯನ್ನು ಸಂಪೂರ್ಣ ಅಗೆದು ಮಣ್ಣು ಹಾಕಿ ಸಮ ಮಾಡಿರುವುದರಿಂದ ಕೆರೆ ಏರಿ ಮೇಲೆ ಓಡಾಡುವ ವಾಹನಗಳ ಸವಾರರು ಅಳುಕಿನಿಂದಲೇ ಓಡಾಡುವಂತಾಗಿದೆ ಎಂಬುದು ಕೋಡಂಬಹಳ್ಳಿ ಗ್ರಾಮದ ಮುಖಂಡ ಕೆ.ಎಸ್.ನಾಗರಾಜು ಆರೋಪವಾಗಿದೆ.

ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬಗಳು:  ರಸ್ತೆಯ ವಿಸ್ತರಣೆಯ ಬಳಿಕ  ವಿದ್ಯುತ್ ಕಂಬಗಳು ಈಗ ರಸ್ತೆಯ ಮಧ್ಯಭಾಗದಲ್ಲಿವೆ. ಪ್ರಯಾಣಿಕರಿಗೆ ಕೆರೆ, ಪ್ರಪಾತ, ದೂಳಿನ ಸಮಸ್ಯೆಯ ಜೊತೆಗೆ ರಸ್ತೆಯ ಮಧ್ಯದಲ್ಲಿರುವ ವಿದ್ಯುತ್ ಕಂಬಗಳು ಮರಣ ಸದೃಶವಾಗಿವೆ. ರಸ್ತೆಯ ಉದ್ದಕ್ಕೂ ಮಧ್ಯಭಾಗದಲ್ಲಿಯೆ ಇರುವ ವಿದ್ಯುತ್ ಕಂಬಗಳಿಂದಾಗಿ ಪ್ರಯಾಣಿಕರು ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯ ಎದುರಿಸುವಂತಾಗಿದೆ.

ರಾತ್ರಿ ವೇಳೆಯಲ್ಲಂತೂ ಹಲವಾರು ಮಂದಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಕೈಕಾಲು ಮುರಿದುಕೊಂಡಿದ್ದಾರೆ ಎಂದು ಮಂಗಾಡಹಳ್ಳಿ ಗ್ರಾಮದ ಎಂ.ಜೆ.ಮಹೇಶ್, ಪುಟ್ಟಸ್ವಾಮಿ ವಿವರಿಸುತ್ತಾರೆ.

ರಸ್ತೆಯ ಅಭಿವೃದ್ಧಿ ಕಾಮಗಾರಿ ವಿಳಂಬವಾಗಲು ವಿದ್ಯುತ್ ಕಂಬಗಳೇ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ. ಲೋಕೋಪಯೋಗಿ ಇಲಾಖೆಯು ರಸ್ತೆ ಅಭಿವೃದ್ಧಿಗೆ ತುರ್ತಾಗಿ ಕೆಲಸ ಆರಂಭಿಸಿ ಬಿರುಸಿನ ಕೆಲಸ ಮಾಡಿತ್ತು. ಈಗ ವಿದ್ಯುತ್ ಕಂಬಗಳು ಮಧ್ಯಭಾಗದಲ್ಲಿರುವುದರಿಂದ ಅವು ತೆಗೆಯುವವರೆಗೆ ಡಾಂಬರೀಕರಣ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಬೆಸ್ಕಾಂಗೆ ಪತ್ರ ಬರೆದು ಕಾಮಗಾರಿ ನಿಲ್ಲಿಸಿದೆ ಎಂದು ತಿಳಿದು ಬಂದಿದೆ.

ಸಮಸ್ಯೆ ಏನು?: ರಸ್ತೆಯ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬ ಸ್ಥಳಾಂತರಿಸಬೇಕಾದರೆ ಅದಕ್ಕೆ ಲೋಕೋಪಯೋಗಿ ಇಲಾಖೆ ಸೇವಾ ಶುಲ್ಕ ಕಟ್ಟಬೇಕು. ಆ ಹಣ ಈವರೆಗೆ ಬಾರದ ಕಾರಣ ಬೆಸ್ಕಾಂ ಕಂಬ ತೆರವು ಮಾಡಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.

ಸೇವಾ ಶುಲ್ಕ ಭರಿಸಲು ಲೋಕೋಪಯೋಗಿ ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಈ ಬಗ್ಗೆ ಬೆಸ್ಕಾಂ ಇಲಾಖೆಗೆ ಪತ್ರ ಬರೆಯಲಾಗಿದೆ. ಕಂಬಗಳನ್ನು ತೆರವು ಮಾಡಲು ಟೆಂಡರ್ ಮಾಡಲು ಸಮಯ ಬೇಕಿರುವುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಸಿದ್ದಪ್ಪ ತಿಳಿಸುತ್ತಾರೆ.

ಲೋಕೋಪಯೋಗಿ ಇಲಾಖೆ ವತಿಯಿಂದ ಪತ್ರ ಬಂದಿದ್ದು, ಕಂಬಗಳ ಸ್ಥಳಾಂತರಕ್ಕೆ ಬೇಕಾದ ಅಂದಾಜು ವೆಚ್ಚದ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಟೆಂಡರ್ ಕಾರ್ಯ ಪೂರ್ಣಗೊಳಿಸಿ ಕಂಬಗಳನ್ನು ಸ್ಥಳಾಂತರಿಸಿ ಹೊಸ ಲೈನ್ ಎಳೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಬೆಸ್ಕಾಂ ಎಇಇ ಆಸಿಫ್ ಖಾನ್ ತಿಳಿಸುತ್ತಾರೆ.

ರೈತರ ಅಳಲು: ಸುಮಾರು ಎರಡು ಕಿ.ಮೀ. ಉದ್ದ ರಸ್ತೆಯು ಸಂಪೂರ್ಣ ದೂಳುಮಯವಾಗಿದೆ. ರಸ್ತೆಯ ಕೆಳಭಾಗದಲ್ಲಿರುವ ಬೆಳೆಗಳ ಮೇಲೆ ದೂಳು ಆವರಿಸಿ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ಬಸ್ಸು, ಲಾರಿಗಳಿಂದ ಏಳುವ ದೂಳು ರೇಷ್ಮೆಗೆ ಬೇಕಿರುವ ಹಿಪ್ಪುನೇರಳೆ ಸೊಪ್ಪಿನ ಮೇಲೆ ಕೂರುತ್ತಿದೆ. ಆ ಸೊಪ್ಪನ್ನು ರೇಷ್ಮೆಹುಳುಗಳಿಗೆ ಹಾಕಿದಾಗ ಅವು ತಿಂದು ರೋಗರುಜಿನಗಳಿಗೆ ಬಲಿಯಾಗುತ್ತಿವೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ರೈತರಾದ ಕುಮಾರ್, ರಾಜು, ಶಿವರಾಮ್, ಕರಿಯಪ್ಪ ಹೇಳಿದ್ದಾರೆ.ಪ್ರಯಾಣಿಕರ ಹಾಗೂ ರೈತರ ಹಿತದೃಷ್ಟಿಯಿಂದ ರಸ್ತೆ ಕಾಮಗಾರಿಯನ್ನು ಶೀಘ್ರ ಮುಕ್ತಾಯ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.
- ಎಚ್.ಎಂ. ರಮೇಶ್

*
ಶೀಘ್ರವೇ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿ ಕೆರೆ ರಸ್ತೆಗೆ ಡಾಂಬರೀಕರಣ ಮಾಡುವ ವ್ಯವಸ್ಥೆ ಮಾಡಲಾಗುವುದು. ಇದರ ಬಗ್ಗೆ ಸಾರ್ವಜನಿಕರು ಆತಂಕ ಪಡಬಾರದು
-ಸಿದ್ದಪ್ಪ,
ಎಇಇ, ಲೋಕೋಪಯೋಗಿ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT