ADVERTISEMENT

ಕೆರೆ–ಕಟ್ಟೆಗಳಿಗೆ ಜೀವ ತುಂಬಿದ ವರುಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 10:08 IST
Last Updated 4 ಸೆಪ್ಟೆಂಬರ್ 2017, 10:08 IST

ರಾಮನಗರ: ಬರದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಇದೀಗ ಭರಪೂರ ವರ್ಷಧಾರೆಯಾಗುತ್ತಿದ್ದು, ಕೆರೆ–ಕಟ್ಟೆಗಳು ತುಂಬುತ್ತಿವೆ. ಬಹುತೇಕ ಕೃಷಿ ಜಮೀನು ಬಿತ್ತನೆಗೆ ಒಳಪಟ್ಟಿದ್ದು, ರೈತರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಇದ್ದಾರೆ.

ಜಿಲ್ಲೆಯ ಹಲವು ಕೆರೆಗಳು ಈಗಾಗಲೇ ಕೋಡಿ ಬಿದ್ದಿದ್ದು, ಇನ್ನೂ ಹಲವು ಭರ್ತಿಯ ಹಂತಕ್ಕೆ ತಲುಪಿವೆ. ಅಗತ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗುತ್ತಿದ್ದು, ಕೃಷಿ ಕಾರ್ಯಕ್ಕೆ, ಜಾನುವಾರುಗಳ ಬಳಕೆಗೆ ಹೆಚ್ಚು ಅನುಕೂಲವಾಗಿದೆ. ಅಚ್ಚುಕಟ್ಟು ಪ್ರದೇಶಗಳ ರೈತರು ಭತ್ತ, ಜೋಳ ಮೊದಲಾದ ಬೆಳೆಗಳನ್ನು ಬೆಳೆಯಲಾರಂಭಿಸಿದ್ದಾರೆ.

ರಾಮನಗರ ತಾಲ್ಲೂಕಿನ ಹುಣಸನಹಳ್ಳಿ ಬಳಿಯ ಮದಗದ ಕೆರೆಯು ಕೋಡಿ ಬಿದ್ದಿದೆ. ಇದರಿಂದ ಹೊರ ಹರಿಯುವ ನೀರು ಹಳ್ಳದ ಮೂಲಕ ಬಂದು ಗ್ರಾಮದ ಹೊರವಲಯದಲ್ಲಿನ ಜಮೀನುಗಳನ್ನು ಹೊಕ್ಕಿದೆ. ಇದರಂದಾಗಿ ನಾಲ್ಕಾರು ಎಕರೆ ಪ್ರದೇಶದಲ್ಲಿನ ರಾಗಿ ಹೊಲ, ತೆಂಗಿನ ತೋಟಗಳಲ್ಲಿ ಮಳೆ ನೀರು ನಿಲ್ಲಲು ಆರಂಭಿಸಿದೆ. ಮಳೆಯ ಪ್ರಮಾಣ ಹೆಚ್ಚಾದಲ್ಲಿ ಈ ಭಾಗದಲ್ಲಿ ಇನ್ನಷ್ಟು ಜಮೀನಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಕಳೆದ ವರ್ಷ ಜುಲೈ 26–27ರಂದು ಸುರಿದ ಮಳೆಯ ಸಂದರ್ಭವೂ ಈ ಕೆರೆಯು ಕೋಡಿ ಬಿದ್ದಿತ್ತು.

ADVERTISEMENT

ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ತಮ್ಮನಾಯಕನಹಳ್ಳಿ ಕೆರೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಕಳೆದ ಬೇಸಿಗೆಯಲ್ಲಿ ಇಡೀ ಕೆರೆ ಬರಿದಾಗಿತ್ತು. ಇದೀಗ ಭರ್ತಿಯಾಗುತ್ತಿದೆ. ಇನ್ನೂ ಹತ್ತು ಹಲವು ಕೆರೆಗಳಲ್ಲಿಯೂ ಇದೇ ಚಿತ್ರಣವಿದೆ. ಹಳ್ಳಗಳು ಉಕ್ಕಿ ಹರಿಯತೊಡಗಿವೆ.

ಕೃಷಿ ಕಾರ್ಯ ಚುರುಕು: ಜಿಲ್ಲೆಯಲ್ಲಿ ಈ ವರ್ಷ ಮುಂಗಾರಿನಲ್ಲಿ ಒಟ್ಟು 1.14 ಲಕ್ಷ ಹೆಕ್ಟೇರ್ ಕೃಷಿ ಜಮೀನಿನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಜೂನ್ ಹಾಗೂ ಜುಲೈನಲ್ಲಿ ಮಳೆಯ ಕೊರತೆಯಿಂದಾಗಿ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಬರ ಪರಿಸ್ಥಿತಿ ಎದುರಾಗುವ ಆತಂಕವಿತ್ತು. ಆದರೆ ಆಗಸ್ಟ್‌ನಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾದ ಕಾರಣ ಜಿಲ್ಲೆಯ ಕೃಷಿ ಚಿತ್ರಣವೇ ಬದಲಾಗಿದೆ. ಆಗಸ್ಟ್‌ನಲ್ಲಿ ರಾಗಿ ಬಿತ್ತನೆ ಕಾರ್ಯವು ಚುರುಕಾಗಿ ನಡೆದಿದ್ದು, ನಿಗದಿತ ಗುರಿ ತಲುಪಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.