ADVERTISEMENT

ಕೆಸರುಗದ್ದೆಯಾದ ಕೊಂಡಾಪುರ ರಸ್ತೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 9:04 IST
Last Updated 21 ಸೆಪ್ಟೆಂಬರ್ 2017, 9:04 IST

ಕೊಂಡಾಪುರ (ಚನ್ನಪಟ್ಟಣ): ಕೋಡಂಬಹಳ್ಳಿ ಬಾಣಗಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿ ಸುವ ಕೊಂಡಾಪುರ ರಸ್ತೆಯು ಸಂಪೂರ್ಣ ಕೆಸರುಗದ್ದೆಯಾಗಿದ್ದು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕೊಂಡಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

ಕೊಂಡಾಪುರ ಗ್ರಾಮದ ಮಧ್ಯಭಾಗದಲ್ಲಿ ಹಾದುಹೋಗುವ ಈ ರಸ್ತೆ ಹಲವಾರು ವರ್ಷಗಳಿಂದ ದುಸ್ಥಿತಿಯಲ್ಲಿದೆ. ಇದರ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳೂ ಗಮನ ಹರಿಸಿಲ್ಲ ಎಂದು ಗ್ರಾಮದ ಕೆ.ಎಂ. ಜಯರಾಮು, ರಾಜಣ್ಣ, ಸುದರ್ಶನ್, ಶ್ರೀನಿವಾಸ್, ಕೆ.ಟಿ.ಬಾಬು ದೂರಿದ್ದಾರೆ.

ಈ ರಸ್ತೆಯಲ್ಲಿ ಹಲವಾರು ವಾಹನಗಳು ಪ್ರತಿದಿನ ಸಂಚರಿಸುತ್ತವೆ. ಮಕ್ಕಳನ್ನು ಕರೆದೊಯ್ಯುವ ಶಾಲಾವಾಹನಗಳೂ ಸಂಚರಿಸುತ್ತವೆ. ರಸ್ತೆ ಮೊದಲೇ ಗುಂಡಿಮಯವಾಗಿತ್ತು. ಗ್ರಾಮದ ಮಧ್ಯಭಾಗದಲ್ಲಿಯೇ ಈ ರಸ್ತೆ ಹಾದುಹೋಗುವ ಕಾರಣ ಪಾದಚಾರಿಗಳು, ಬೈಸಿಕಲ್ ಮೇಲೆ ಹುಲ್ಲು ಸೌದೆ ಸಾಗಿಸುವ ರೈತರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇದರ ಜೊತೆಗೆ ಇದೇ ರಸ್ತೆಯಲ್ಲಿ ಲಾರಿ, ಟ್ರ್ಯಾಕ್ಟರ್‌ಗಳು ಚಲಿಸುತ್ತವೆ. ಇದರಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಪರಿಣಮಿಸಿದೆ ಎಂದಿದ್ದಾರೆ.
ಮಳೆಗಾಲದಲ್ಲಂತೂ ಈ ರಸ್ತೆಗೆ ಇಳಿಯುವುದೇ ಕಷ್ಟವಾಗಿದೆ. ಇದರ ಜೊತೆಗೆ ಅಕ್ಕಪಕ್ಕದ ಮನೆಗಳಿಗೆಲ್ಲಾ ಕೆಸರು ಸಹ ರಾಚುತ್ತದೆ ಎಂದಿದ್ದಾರೆ.

ಮಳೆಗಾಲ ಆರಂಭವಾದ ದಿನದಿಂದ ರಸ್ತೆ ಇದೇ ದುಸ್ಥಿತಿಯಲ್ಲಿದೆ. ಮಳೆ ಬಿದ್ದು ಮೂರು ದಿನ ಕಳೆದರೂ ರಸ್ತೆ ಇದೇ ಸ್ಥಿತಿಯಲ್ಲಿರುತ್ತದೆ. ಮೂರು ದಿನ ಬಿಟ್ಟು ಮತ್ತೆ ಮಳೆ ಬಂದರೆ ರಸ್ತೆಯ ಸ್ಥಿತಿ ಯಥಾಸ್ಥಿಯಲ್ಲಿ ಮುಂದುವರೆಯುತ್ತದೆ ಎಂದು ದೂರಿದ್ದಾರೆ.

ಒಂದು ತಿಂಗಳಿಂದ ರಸ್ತೆಯು ಕಿರಿಕಿರಿ ಉಂಟು ಮಾಡುತ್ತಿದೆ. ರಸ್ತೆ ಸರಿಪಡಿಸುವ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸಂಬಂದಪಟ್ಟವರು ರಸ್ತೆಗೆ ಡಾಂಬರು ಹಾಕಬೇಕು. ಜನ ಸಂಚಾರವಿಲ್ಲದ ಎಷ್ಟೋ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಬದಲು ಇಂತಹ ಸಂಪರ್ಕ ರಸ್ತೆಗಳನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.