ಮಾಗಡಿ: ಕುಲದೈವದ ಮೇಲಿನ ಮೂಢ ನಂಬಿಕೆಯಿಂದ ಕೊರೆಯುವ ಚಳಿ, ಎಡಬಿಡದೆ ಸುರಿಯುತ್ತಿರುವ ಮಳೆಯಲ್ಲೂ ಸಹ ಬಾಣಂತಿಯೊಬ್ಬಳು ತನ್ನ ಹಸುಗೂಸಿನೊಂದಿಗೆ ರಾಗಿ ಹೊಲದ ನಡುವೆ ಹುಲ್ಲಿನ ಗುಡಿಸಲಿನಲ್ಲಿ ದಿನದೂಡುತ್ತಿರುವ ಘಟನೆ ತಾಲ್ಲೂಕಿನ ತಟವಾಳು ದಾಖಲೆ ಅರೆಅಲೆಮಾರಿ ಕಾಡುಗೊಲ್ಲರ ಹಟ್ಟಿಯಲ್ಲಿ ನಡೆದಿದೆ.
ಮಹಿಳೆಗೆ ಹೆರಿಗೆಯಾಗಿ 1 ತಿಂಗಳಾಗಿದೆ. ಮುದ್ದಾದ ಗಂಡುಮಗುವಿಗೆ ಜನ್ಮನೀಡಿದ್ದಾಳೆ. ಗೊಲ್ಲರ ಹಟ್ಟಿಯ ಸಂಪ್ರದಾಯದಂತೆ ಹೆರಿಗೆಯಾದ ಬಾಣಂತಿ ತನ್ನ ಹಸುಗೂಸಿನೊಂದಿಗೆ 3 ತಿಂಗಳು ಸೂತಕದ ಹೆಸರಿನಲ್ಲಿ ಗೊಲ್ಲರ ಹಟ್ಟಿಯಿಂದ 1 ಕಿ.ಮಿ.ದೂರದಲ್ಲಿ 3 ಅಡಿಗಳ ಸುತ್ತಳತೆಯ ಹುಲ್ಲಿನ ಗುಡಿಸಲಿನಲ್ಲಿರಬೇಕು.
ಪುಟ್ಟಗುಡಿಸಲಿನಲ್ಲಿ ಹಸಿಮೈ ಬಾಣಂತಿಯೇ ಅಡುಗೆ ಮಾಡಿಕೊಳ್ಳಬೇಕು. ಗುಡಿಸಿಲಿನಿಂದ ಹೊರಗೆ ಮಗುವಿಗೆ ಬಿಸಿ ನೀರು ಕಾಯಿಸಿಕೊಂಡು ಸ್ನಾನ ಮಾಡಿಸಬೇಕು. ಬಟ್ಟೆ ತೊಳೆದುಕೊಳ್ಳಬೇಕು. ಬಾಣಂತಿ ತನ್ನ ಆರೈಕೆ ತಾನೇ ಮಾಡಿಕೊಳ್ಳಬೇಕಿದೆ. ಗೊಲ್ಲರ ಹಟ್ಟಿಯ ಇತರೆ ಮಹಿಳೆಯರು ಯಾರು ಬಾಣಂತಿ ಮತ್ತು ಮಗುವನ್ನು ಮುಟ್ಟುವಂತಿಲ್ಲ.
ಬುಡಕಟ್ಟು ಸಂಪ್ರದಾಯ: ಗೊಲ್ಲರ ಹಟ್ಟಿಯ ಅಜ್ಜಪ್ಪ ಸ್ವಾಮಿ ದೇವರ ಪಟ್ಟದ ಪೂಜಾರಿ ಚಿತ್ತಯ್ಯ ಮಾತನಾಡಿ ‘ನಾವು ಬುಡಕಟ್ಟು ಸಂಪ್ರದಾಯದ ಕಾಡುಗೊಲ್ಲರು.
ಬಹಳ ಹಿಂದೆ ನಮ್ಮ ಪೂರ್ವಿಕರು ಕಾಡಿನಲ್ಲಿದ್ದಾಗ ಕಾಡುಮೇಡುಗಳಲ್ಲಿ ದಟ್ಟಹಸಿರಿನ ನಡುವೆ ಹುಲ್ಲಿನ ಗುಡಿಸಲು ಕಟ್ಟಿಕೊಂಡಿದ್ದರು. ಗುಡಿಸಲಿನ ಒಳಗೆ ದನಕರುಗಳಿಗೆ ಒಂದು ಗುಡಿಸಲು, ಕುರಿಮರಿಗೆ ಒಂದು ಗುಡಿಸಲು, ಹೆರಿಗೆಯಾದ ಮಹಿಳೆಯರಿಗಾಗಿ ಮತ್ತೊಂದು ಗುಡಿಸಲು ಇರುತ್ತಿತ್ತು. ಇತ್ತೀಚೆಗೆ ಹೆರಿಯಾದ ಮಹಿಳೆಯರಿಗೆ ಪ್ರತ್ಯೇಕ ಗುಡಿಸಲು ಕಟ್ಟಿಕೊಡುತ್ತಿದ್ದೇವೆ. ನಾವೆಲ್ಲರೂ ನಮ್ಮ ಕುಲದೈವದಲ್ಲಿ ಕೇಳಿದ ನಂತರ ಈ ಪದ್ಧತಿಯನ್ನು ಬದಲಾಯಿಸಲು ನಿರ್ಧರಿಸಿದ್ದೇವೆ’ ಎಂದರು.
‘ಕಾಡುಗೊಲ್ಲರ ಸಾಂಸ್ಕೃತಿಕ ವೀರರಾದ ದೊಡ್ಡೋನು ಜುಂಜಪ್ಪ, ಅಜ್ಜಪ್ಪಸ್ವಾಮಿ, ಚಿಕ್ಕಣ್ಣ ಸ್ವಾಮಿ , ಚಿತ್ತಯ್ಯ, ಕಾಟಯ್ಯ ಇತರರು ತಮ್ಮ ಜನಪದ ಕಥನ ಕಾವ್ಯಗಳಲ್ಲಿ ಎಲ್ಲಿಯೂ ಸಹ ಕುಲದ ಮಹಿಳೆಯರು ಋತುಮತಿಯಾದಾಗ, ಮೈನೆರೆದಾಗ, ಹೆರಿಗೆಯಾದಾಗ ಹಟ್ಟಿಯಿಂದ ಹೊರಗೆ ಉಳಿಯಬೇಕು ಎಂದು ಹೇಳಿಲ್ಲ’ ಎಂಬುದು ಜನಪದ ವಿದ್ವಾಂಸರಾದ ಡಾ. ಟಿ.ಗೋವಿಂದರಾಜು ಅಭಿಪ್ರಾಯ ಪಟ್ಟಿದ್ದಾರೆ,
‘ಮಹಿಳೆಯರಲ್ಲಿ ಅಕ್ಷರದ ಅರಿವು ಮೂಡಿಸಿ, ಮೂಢನಂಬಿಕೆಗಳನ್ನು ತಡೆಗಟ್ಟಲು ಜಾಗೃತಿ ಮೂಡಿಸಬೇಕು’ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಪ್ರತಿನಿಧಿ ವನಜ ಮತ್ತು ಜನವಾದಿ ಮಹಿಳಾ ಸಂಘಟನೆ ಸಂಚಾಲಕಿ ಲಕ್ಷ್ಮೀದೇವಿ ತಿಳಿಸಿದ್ದಾರೆ.
‘ತಾಲ್ಲೂಕಿನ 28 ಗೊಲ್ಲರ ಹಟ್ಟಿಗಳಲ್ಲಿ ಇರುವ ಗೊಲ್ಲ ಸಮುದಾಯದ ಅಕ್ಷರಸ್ಥ ಯುವಕರು ಮುಂದೆ ಬಂದು ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ಪದ್ಧತಿ ನಿರ್ಮೂಲನೆಗೆ ಮುಂದಾಗಬೇಕಿದೆ’ ಎಂದು ಪ್ರಗತಿಪರ ಚಿಂತಕರಾದ ಕೆ.ವಿ.ರವಿಕುಮಾರ್, ತಾಲ್ಲೂಕು ಡಿಎಸ್ಎಸ್ ಸಂಚಾಲಕ ಗಂಗಾಧರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.