ADVERTISEMENT

‘ಜನರ ಪ್ರೀತಿಯೇ ನನ್ನ ಆಸ್ತಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 6:28 IST
Last Updated 17 ಡಿಸೆಂಬರ್ 2017, 6:28 IST
ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದ ಹೊರಗೆ ಕೇಕ್‌ ಕತ್ತರಿಸಿದ ಎಚ್‌.ಡಿ. ಕುಮಾರಸ್ವಾಮಿ ಕಾರ್ಯಕರ್ತರಿಗೆ ತಿನ್ನಿಸಿದರು
ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದ ಹೊರಗೆ ಕೇಕ್‌ ಕತ್ತರಿಸಿದ ಎಚ್‌.ಡಿ. ಕುಮಾರಸ್ವಾಮಿ ಕಾರ್ಯಕರ್ತರಿಗೆ ತಿನ್ನಿಸಿದರು   

ರಾಮನಗರ: ಶಾಸಕ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಜನ್ಮದಿನದ ಅಂಗವಾಗಿ ತಮಗೆ ರಾಜಕೀಯ ಪುನರ್ಜನ್ಮ ನೀಡಿದ ರಾಮನಗರಕ್ಕೆ ಶನಿವಾರ ಭೇಟಿ ಕೊಟ್ಟು ಅಭಿಮಾನಿಗಳಿಂದ ಹಾರೈಕೆ ಪಡೆದರು.

ರಾತ್ರಿ 8ರ ಸುಮಾರಿಗೆ ನಗರದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇಗುಲದ ಹೊರಗೆ ಕಾರ್ಯಕರ್ತರ ಜೊತೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ಎಷ್ಟೇ ಬಿಡುವಿಲ್ಲದ ಕಾರ್ಯಕ್ರಮ ಇದ್ದರೂ ಇಲ್ಲಿಗೆ ಬರದಿದ್ದರೆ ಸಮಾಧಾನ ಇಲ್ಲ. ತಡವಾಗಿದ್ದರೂ ಈ ಜನ ನನಗಾಗಿ ಕಾದು ಪ್ರೀತಿಯಿಂದ ಮನೆ ಮಗನ ಹುಟ್ಟುಹಬ್ಬದಂತೆ ಆಚರಿಸಿದ್ದಾರೆ. ಅವರು ನನ್ನನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಅದೇ ನನ್ನ ಆಸ್ತಿ’ ಎಂದು ಹೇಳಿದರು.

ADVERTISEMENT

‘ಬೆಳಿಗ್ಗೆ 6.30ರಿಂದ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಎಲ್ಲೆಡೆ ಕಾರ್ಯಕರ್ತರು ನನ್ನ ಜನ್ಮದಿನಾಚರಣೆ ಮಾಡುತ್ತಿದ್ದು, ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದೇನೆ. ಜನರ ಸಮಸ್ಯೆ, ರಾಜ್ಯದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಬಗ್ಗೆ ದೇವರ ಮುಂದೆ ಸಂಕಲ್ಪ ಮಾಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದೇನೆ’ ಎಂದು ನುಡಿದರು.

ಬಳಿಕ ಅವರು ನಗರದ ವಿವಿಧ ದೇಗುಲಗಳು, ಚರ್ಚ್‌ ಹಾಗೂ ಮಸೀದಿಗೆ ಭೇಟಿ ನೀಡಿದರು. ಅಲ್ಲಲ್ಲಿ ಅಡ್ಡಗಟ್ಟಿದ ಅಭಿಮಾನಿಗಳು: ಬೆಂಗಳೂರು ಮಾರ್ಗದ ಮೂಲಕ ಬಿಡದಿಯತ್ತ ಧಾವಿಸಿದ ಕುಮಾರಸ್ವಾಮಿ ಅವರನ್ನು ಅಭಿಮಾನಿಗಳು ಅಲ್ಲಲ್ಲಿ ಅಡ್ಡಗಟ್ಟಿ ಶುಭಾಶಯ ಕೋರಿದರು.

ಬಿಡದಿಯ ಬಸ್‌ ನಿಲ್ದಾಣ ಸಮೀಪ ನಡೆದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಜನರು ನೆರೆದಿದ್ದರು. ಅಲ್ಲಿಯೂ ಕೇಕ್‌ ಕತ್ತರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಕುಮಾರಸ್ವಾಮಿ ಮಾತನಾಡಿದರು. ಕೆಂಪನಹಳ್ಳಿ, ಮಾಯಗಾನಹಳ್ಳಿ, ಎಸ್‌.ಬಿ. ದೊಡ್ಡಿ, ಬಸವನಪುರ, ರಾಮನಗರ ಆರ್ಚ್‌... ಹೀಗೆ ಅಲ್ಲಲ್ಲಿ ಜನರು ಗುಂಪಾಗಿ ನಿಂತು ಕುಮಾರಸ್ವಾಮಿ ಅವರನ್ನು ಕಂಡು ಶುಭಾಶಯ ಕೋರಿದರು.

ಗುಜರಾತ್ ಫಲಿತಾಂಶ ಲೆಕ್ಕಕ್ಕಿಲ್ಲ

ಇದೇ 18ರಂದು ಪ್ರಕಟಗೊಳ್ಳಲಿರುವ ಗುಜರಾತ್‌ ವಿಧಾನಸಭೆಯ ಚುನಾವಣೆಯ ಫಲಿತಾಂಶ ಕರ್ನಾಟಕದ ರಾಜಕೀಯದ ಮೇಲೆ ಯಾವುದೇ ಪ್ರಭಾವ ಬೀರದು ಎಂದು ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಬೇರೆ ರಾಜ್ಯಗಳಿಗೂ ಕರ್ನಾಟಕಕ್ಕೂ ವ್ಯತ್ಯಾಸವಿದೆ. ಐದು ವರ್ಷ ಕಾಲ ಇಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭ ಆದ ಅವಾಂತರಗಳನ್ನು ಜನರು ಮರೆತಿಲ್ಲ. ಕಾಂಗ್ರೆಸ್‌ ಆಡಳಿತಕ್ಕೂ ಜನ ಬೇಸತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.