ADVERTISEMENT

‘ಜನವರಿಗೆ ವಿಧಾನಸೌಧ ಪಾದಯಾತ್ರೆ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:42 IST
Last Updated 20 ಡಿಸೆಂಬರ್ 2017, 5:42 IST
ಮೇಕೆದಾಟು ಹೋರಾಟ ಸಮಿತಿಯ ಸಭೆಯಲ್ಲಿ ಅಧ್ಯಕ್ಷ ಬಿ. ನಾಗರಾಜು ಮಾತನಾಡಿದರು
ಮೇಕೆದಾಟು ಹೋರಾಟ ಸಮಿತಿಯ ಸಭೆಯಲ್ಲಿ ಅಧ್ಯಕ್ಷ ಬಿ. ನಾಗರಾಜು ಮಾತನಾಡಿದರು   

ರಾಮನಗರ: ಮೇಕೆದಾಟು ಯೋಜನೆ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಮೇಕೆದಾಟುವಿನಿಂದ ವಿಧಾನ ಸೌಧದವರೆಗೆ ಜನವರಿ ತಿಂಗಳ ಕೊನೆಯ ವಾರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ ಬಿ.ನಾಗರಾಜು ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಮನಗರ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಮೇಕೆದಾಟು ಬಳಿ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ಈಗಾಗಲೇ ಯೋಜನೆಗೆ ಹಣ ಮಂಜೂರಾತಿ ಮಾಡಿ ಈಗ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಯೋಜನೆಯನ್ನು ಅತಿ ಶೀಘ್ರವಾಗಿ ಕಾರ್ಯರೂಪಕ್ಕೆ ತರುವಂತೆ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ಸಮಿತಿ ಎಲ್ಲಾ ಮಠಾಧೀಶರ ನೇತೃತ್ವ ದಲ್ಲಿ ಚಳವಳಿ ಮತ್ತು ಹೋರಾಟ ಮಾಡಿದೆ. ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳಿಸಲು ಹೋರಾಟ ಸಮಿತಿ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಹೋಬಳಿ ಮಟ್ಟದ ಸಮಿತಿ ರಚನೆ ಮಾಡಬೇಕು. ಎಲ್ಲಾ ಗ್ರಾಮಗಳಲ್ಲೂ ಸಭೆ ನಡೆಸಿ ಅಣೆಕಟ್ಟೆ ನಿರ್ಮಾಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಹೋ ರಾಟದ ಕಿಚ್ಚು ಹಚ್ಚಬೇಕು ಎಂದರು.

ADVERTISEMENT

ಸರ್ಕಾರ ಇನ್ನಾದರೂ ನೆಪ ಹೇಳುವುದನ್ನು ಬಿಟ್ಟು ಯೋಜನೆ ಕಾರ್ಯರೂಪಕ್ಕೆ ತರಬೇಕು. ಇಲ್ಲ ವಾದಲ್ಲಿ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ಮೇಕೆ ದಾಟುವಿನಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆಗೆ ತಮಿಳುನಾಡು ಮೊದಲಿನಿಂದಲೂ ಅಡ್ಡಗಾಲು ಹಾಕು ತ್ತಿದೆ. ಯೋಜನೆಯಿಂದ ತಮಿಳುನಾಡಿಗೆ ಅನ್ಯಾಯ ಆಗುವುದಿಲ್ಲ ಎಂದು ತಿಳಿಸಿದರು.

ರಾಜ್ಯದ ಸಂಸದರು ಸದಸ್ಯರು ಸಂಪೂರ್ಣ ನಿಷ್ಕ್ರಿಯರಾಗಿದ್ದು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಮುಖ್ಯಮಂತ್ರಿ ಅವರು ಕೂಡಲೇ ಸರ್ವಪಕ್ಷಗಳ ಸಭೆ ನಡೆಸಿ ಕೇಂದ್ರಕ್ಕೆ ನಿಯೋಗ ಕಳಿಸಬೇಕು. ರಾಜ್ಯದ 28 ಸಂಸದರು, ಸರ್ಕಾರಕ್ಕೆ, ಸಚಿವರಿಗೆ ಮನವಿ ಪತ್ರ ನೀಡಲಾಗಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣ ಮಾಡುವುದರಿಂದ 5 ಜಿಲ್ಲೆಯ ಬಯಲು ಪ್ರದೇಶಕ್ಕೆ ನೀರು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅಂತರ್ಜಲ ಅಭಿವೃಧ್ದಿಯಾಗುತ್ತದೆ, ವಿದ್ಯುತ್‌ ಉತ್ಪಾದನೆಗೂ ಅನುಕೂಲ ಆಗುವು ದರಿಂದ ಅಣೆಕಟ್ಟೆ ನಿರ್ಮಾಣ ಆಗಲೇಬೇಕು, ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ವಿಧಾನಸೌಧ ಪಾದಯಾತ್ರೆಗೆ ಸಂಬಂಧಿಸಿದಂತೆ ಜನವರಿ 4ರಂದು ಬೆಳಿಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಮೇಕೆದಾಟು ಹೋರಾಟ ಸಮಿತಿಯ ಪಧಾಧಿಕಾರಿಗಳಾದ ಸಂಪತ್‌ಕುಮಾರ್, ಮಲ್ಲಪ್ಪ, ಪಟೇಲ್ ಸಿ ರಾಜು, ಎಸ್.ಎಲ್. ವನರಾಜು, ಎಂ.ಡಿ. ಶಿವಕುಮಾರ್, ಬಿ.ಟಿ. ದಿನೇಶ್, ರಾಮಾಂಜನೇಯ, ಗೋಪಿ. ಚಂದ್ರಶೇಖರರೆಡ್ಡಿ, ಮುತಾಯಿರ್, ಮಂಜುನಾಥ್, ವಿಶ್ವನಾಥ್, ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.