ADVERTISEMENT

ಜಾನಪದದಲ್ಲಿ ಸಂಶೋಧನೆ ಅವಶ್ಯ

​ಪ್ರಜಾವಾಣಿ ವಾರ್ತೆ
Published 23 ಮೇ 2017, 10:30 IST
Last Updated 23 ಮೇ 2017, 10:30 IST

ಚನ್ನಪಟ್ಟಣ: ಜಾನಪದ ನ್ಯಾಯ ನೀತಿ ಮಾನವೀಯ ಮೌಲ್ಯಗಳಂತಹ ಸಾಮಾಜಿಕ ನ್ಯಾಯ ಬಿತ್ತಿದ ತಾಯಿಬೇರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಸವಿ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಈಚೆಗೆ ಆಯೋಜಿಸಿದ್ದ 4ನೇ ವರ್ಷದ ಜಾನಪದ ಕಲೋತ್ಸವ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೂರ್ವಜರ ಕಲೆಯಾದ ಜಾನಪದ ಸಂಸ್ಕೃತಿ ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿ ಸುತ್ತಿರುವುದು ಶ್ಲಾಘನೀಯ. ಇದರೊಂದಿಗೆ ಸಾಂಸ್ಕೃತಿಕ ಯುವ ರಾಯಭಾರಿಗಳು, ಯುವ ಕಲಾವಿದರು ಕನ್ನಡ ಸಂಸ್ಕೃತಿ, ಕಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ತೊಡಗಿಕೊಂಡಿರುವುದು ಸ್ವಾಗತಾರ್ಹ ನಡೆ ಎಂದು ಅವರು ಹೇಳಿದರು.

ADVERTISEMENT

ಜೆಡಿಎಸ್ ಮುಖಂಡ ಡಾ.ಮಲ್ಲೇಶ್ ದ್ಯಾವಾಪಟ್ಟಣ ಮಾತನಾಡಿ, ಜಾನಪದ ಕಲೆ ಹಾಗೂ ಸಾಹಿತ್ಯವು ಕನ್ನಡ ಪರಂಪರೆಯ ಜ್ಞಾನ ಭಂಡಾರವಾಗಿದೆ. ಜಾನಪದವನ್ನು ಆಳವಾಗಿ ಅಧ್ಯಯನ ಮಾಡಿದಷ್ಟೂ ಹೊಸಹೊಸ ವಿಚಾರ ಗಳು ಹೊರ ಬರುತ್ತವೆ. ಈ ಬಗ್ಗೆ ಹೆಚ್ಚು ಸಂಶೋಧನೆ ಅವಶ್ಯ ಎಂದು ಅಭಿಪ್ರಾಯಪಟ್ಟರು.

ಕಲಾವಿದರಾದ ವಿನಯ್ ಕುಮಾರ್ ನೇತೃತ್ವದ ಕಲಾತಂಡಗಳು ಪೂಜಾ ಕುಣಿತ, ವೀರಗಾಸೆ, ತಮಟೆವಾದನ, ಗಾರುಡಿಗೊಂಬೆ ಕಲೆಗಳ ಪ್ರದರ್ಶನ ಮಾಡಿದರು. ಸೋಬಾನೆ ಕಲಾವಿದರಾದ ಕೆಂಚಮ್ಮ ತಂಡ, ಚಿಕ್ಕಮ್ಮ ತಂಡ, ಸಣ್ಣಮ್ಮ ತಂಡ, ಈರಮ್ಮ ತಂಡ, ಜಯಮ್ಮ ತಂಡ, ಚಂದ್ರಮ್ಮ ತಂಡ, ದೊಡ್ಡತಾಯಮ್ಮ ತಂಡ ಹಾಗೂ ದೊಡ್ಡೋಳಮ್ಮ ಕಲಾ ತಂಡಗಳು ಭಾಗವಹಿಸಿದ್ದವು.

* * 

ಕಲೆ ಸಂಸ್ಕೃತಿಯ ಜೊತೆಗೆ ನೆಲ ಜನ ಭಾಷೆಗೆ ಗೌರವ ಸಲ್ಲಿಸುವ ಕೆಲಸವಾಗಬೇಕು. ತನುಮನಗಳಲ್ಲಿ ಜಾನಪದವನ್ನು ತುಂಬಿಕೊಳ್ಳುವ ಕೆಲಸವಾಗಬೇಕು
ಎ.ಶಿವಣ್ಣ
ಹಿರಿಯ ರಂಗಭೂಮಿ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.