ADVERTISEMENT

ಜಾನಪದದ ಕಣಜ ಗೊಲ್ಲರಹಟ್ಟಿ

ಜಾನಪದ ವಿದ್ವಾಂಸ ಡಾ. ಜಯರಾಮು ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2015, 8:16 IST
Last Updated 28 ಏಪ್ರಿಲ್ 2015, 8:16 IST

ಮಾಗಡಿ:  ಕಾಡುಗೊಲ್ಲರ ಹಟ್ಟಿಗಳು ಅಕ್ಷರ ವಂಚಿತರಾಗಿದ್ದರೂ ಸಾಂಸ್ಕೃತಿಕ ವೀರರ ಕಥನ ಕಾವ್ಯಗಳನ್ನು ಒಳಗೊಂಡಿರುವ ಜನಪದ ಕಣಜಗಳಿದ್ದಂತೆ ಎಂದು ಜನಪದ ವಿದ್ವಾಂಸ ಡಾ.ಜಯರಾಮು ಪೊನ್ನೋಬೇನ ಹಳ್ಳಿ ನುಡಿದರು.

ತಾಲ್ಲೂಕಿನ ಪೋಲೇನ ಹಳ್ಳಿಯಲ್ಲಿ  ತಾಲ್ಲೂಕು ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘ ಮತ್ತು ಬೆಂಗಳೂರಿನ ಗಣೆ ಪ್ರಕಾಶನ ಹಾಗೂ  ಕಾಡುಗೊಲ್ಲ ಚಿಂತನಾ ಚಾವಡಿಗಳ ಸಹಯೋಗದಲ್ಲಿ ಭಾನುವಾರ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

ಕಾಡುಗೊಲ್ಲರ ಮಹಿಳೆಯರ ಮೇಲೆ ಹೇರಿರುವ ಅಂಟುಮುಂಟು ಕೈಬಿಡುವಂತೆ ಜಾಗೃತಿ ಮೂಡಿಸಲಾಗುವುದು. ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಾಡುಗೊಲ್ಲರೆಂದು, ಉಪಜಾತಿ ಹಟ್ಟಿಗೊಲ್ಲ, ಅಡವಿ ಗೊಲ್ಲ ಎಂದೂ, ಅಲೆಮಾರಿ, ಅರೆಅಲೆಮಾರಿ ಕಾಲಂನಲ್ಲಿ ‘ಹೌದು’  ಬರೆಸಬೇಕಿದೆ ಎಂದು ತಿಳಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಮೊದಲಾರಯ್ಯನ ಪಾಳ್ಯದ ಗಂಗಣ್ಣ ಮಾತನಾಡಿ, ನಮ್ಮ ಊರಿನಲ್ಲಿ ಕಾಡುಗೊಲ್ಲರ ಮಹಿಳೆಯರನ್ನು ಹೆರಿಗೆ ಮತ್ತು ಮುಟ್ಟಿನ ಸಮಯದಲ್ಲಿ  ಹಟ್ಟಿಯ ಹೊರಗೆ ಕಳಿಸುತ್ತಿಲ್ಲ. ಉಳಿದ ಗೊಲ್ಲರ ಹಟ್ಟಿಗಳಲ್ಲಿ ಇರುವ ಸೂತಕ ನಿವಾರಣೆಗೆ ಎಲ್ಲರೂ ದುಡಿಯ ಬೇಕಿದೆ ಎಂದರು.

ಮೂಡಲ ಗಿರಿ ತಿಮ್ಮಪ್ಪ ಸ್ವಾಮಿ ದೇವರ  ಪೂಜಾರಿ ತಮ್ಮಯ್ಯ, ಅಜ್ಜಪ್ಪ ಸ್ವಾಮಿ ದೇವರ ಪೂಜಾರಿ ಚಿತ್ತಯ್ಯ, ಶಿವಣ್ಣ ಮಾತನಾಡಿ ಸಂಪ್ರದಾಯವನ್ನು  ಏಕಾಏಕಿ ಬಿಡುವುದು ಸುಲಭವಲ್ಲ. ಬದಲಾಗಿ ಅರಿವು ಮೂಡಿಸಲಾಗುವುದು ಎಂದರು. ಮುಂದಿನ ಸಭೆಯನ್ನು ಮೇ 5ರಂದು ಬೆಳಿಗ್ಗೆ 10 ಗಂಟೆಗೆ ಬಸವೇನಹಳ್ಳಿ ಗೊಲ್ಲರ ಹಟ್ಟಿಯಲ್ಲಿ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.