ADVERTISEMENT

ಠಾಣೆ ಎದುರು ಶಾಸಕ ಬಾಲಕೃಷ್ಣ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:36 IST
Last Updated 19 ಜನವರಿ 2017, 6:36 IST
ಠಾಣೆ ಎದುರು ಶಾಸಕ ಬಾಲಕೃಷ್ಣ ಪ್ರತಿಭಟನೆ
ಠಾಣೆ ಎದುರು ಶಾಸಕ ಬಾಲಕೃಷ್ಣ ಪ್ರತಿಭಟನೆ   

ಕುದೂರು(ಮಾಗಡಿ): ‘ಪ್ರಾಣ ಪಣಕ್ಕಿಟ್ಟಾದರೂ ಸರಿ, ನನ್ನ ಬೆಂಬಲಿಗರನ್ನು ರಕ್ಷಿಸುವುದು ನನ್ನ ಮೊದಲ ಆದ್ಯ ಕರ್ತವ್ಯ’ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ತಿಪ್ಪಸಂದ್ರ ಹೋಬಳಿಯ ಐಯ್ಯಂಡ ಹಳ್ಳಿಯಲ್ಲಿ ದೇವರು ಕರೆಸಿದ್ದ ವಿಚಾರವಾಗಿ ಭಾನುವಾರ ನಡೆದ ಘಟನೆಯ ಬಗ್ಗೆ ಪೊಲೀಸರು ನಿಷ್ಪಕ್ಷಪಾತ ಕ್ರಮ ಕೊಂಡಿಲ್ಲ ಎಂದು  ಆರೋಪಿಸಿ ಬುಧವಾರ ಠಾಣೆಯ ಮುಂದೆ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ಕುದೂರು ಪಿಎಸ್‌ಐ  ಹರೀಶ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ. ಸೋಮವಾರದ ಒಳಗೆ  ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ,  ಬೃಹತ್‌ ಪ್ರತಿಭಟನೆ ಮಾಡುತ್ತೇವೆ, ಗೋಲಿಬಾರ್‌ ಮಾಡಿದರೂ ಚಿಂತೆಯಿಲ್ಲ, ನಿಮ್ಮ ರಕ್ಷಣೆ ನನಗೆ ಸೇರಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುರೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಎಂ.ರಾಮಣ್ಣ, ಗಂಗೋಂಡನ ಹಳ್ಳಿ ಆರ್‌.ರಾಮಣ್ಣ,  ಕಾಗಿಮಡು ಉದ್ದೀಶ್‌, ಕುದೂರಿನ ಲೋಕೇಶ್‌ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪಿಎಸ್‌ಐ ಪ್ರತಿಕ್ರಿಯೆ: ‘ಐಯ್ಯಂಡ ಹಳ್ಳಿಯಲ್ಲಿ ದೇವರು ಕರೆಸಿದ್ದಾಗ ಹೂಮಾಲೆ ಹಾಕಿಲ್ಲ ಎಂದು ದಾಯಾದಿಗಳ ನಡುವೆ ನಡೆದ ಗಲಾಟೆಯ ಬಗ್ಗೆ ಎರಡು  ಕಡೆ ತಲಾ 13 ಜನರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಕಾನೂನಿನಂತೆ ಕ್ರಮ ಕೈಗೊಂಡಿದ್ದೇನೆ’ ಎಂದು ಪಿಎಸ್‌ಐ ಹರೀಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ವಿರುದ್ಧ ದೂರು: ‘ಸಂಸದ ಡಿ.ಕೆ.ಸುರೇಶ್‌ ಕರೆದಿದ್ದ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳ ಸಭೆಯಲ್ಲಿ ಭಾಗವಹಿಸಿದ್ದೆ. ನಾನು ಠಾಣೆಯಲ್ಲಿ ಇಲ್ಲದ ವೇಳೆಯಲ್ಲಿ ಠಾಣೆ ಒಳಗೆ ನುಗ್ಗಿರುವ ಶಾಸಕರು, ಮತ್ತವರ ಬೆಂಬಲಿಗರು  ಟೇಬಲ್‌ ಬಡಿದು, ಸಿಬ್ಬಂದಿ ಕರ್ತವ್ಯಕ್ಕೆ  ಅಡ್ಡಿಪಡಿಸಿದ್ದಲ್ಲದೆ, ನನ್ನನ್ನು ಸಾರ್ವಜನಿಕರ ಎದುರು ನಿಂದಿಸಿದ್ದಾರೆ. ನಾನು ಕರ್ತವ್ಯ ಲೋಪ ಎಸಗಿದ್ದರೆ, ಮೇಲಧಿಕಾರಿಗಳಿಗೆ ದೂರು ನೀಡಿ ತನಿಖೆ ನಡೆಸಬಹುದಿತ್ತು. ವೈಯಕ್ತಿಕವಾಗಿ ನಿಂದನೆ ಮಾಡಿರುವುದರ ವಿರುದ್ಧ  ಎಸ್‌ಪಿ ಅವರಿಗೆ ಶಾಸಕರ ವಿರುದ್ದ ದೂರು ನೀಡುವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.