ADVERTISEMENT

ತಾಮಸಂದ್ರ: ರಸ್ತೆಯಲ್ಲಿ ಹೆಬ್ಬಾವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 7:26 IST
Last Updated 3 ಜುಲೈ 2015, 7:26 IST

ಕನಕಪುರ: ರಸ್ತೆ ದಾಟುತ್ತಿದ್ದ ಹೆಣ್ಣು ಹೆಬ್ಬಾವನ್ನು ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ನೀಡಿರುವ ಘಟನೆ ತಾಮಸಂದ್ರ ಸರ್ಕಲ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.

ಕಸಬಾ ಹೊಬಳಿ ಹೊಸಕೋಟೆ ಬಳಿಯಿರುವ ತಾಮಸಂದ್ರ ಸರ್ಕಲ್‌ನ ಕುಳ್ಳ ಮೋಟಣ್ಣ ಅವರ ಮನೆಯ ಪಕ್ಕದಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಾಗ ಕೂಡಲೇ ಅವರು ಸ್ನೇಕ್‌ ಅರುಣ್‌ ಎಂಬುವರಿಗೆ ಕರೆ ಮಾಡಿದ್ದಾರೆ.  ನಂತರ ಅರುಣ್‌ ಅವರು ಮತ್ತೊಬ್ಬ ಹಾವು ಹಿಡಿಯುವ ನವೀನ್‌ ಅವರ ಜತೆ ತಾಮಸಂದ್ರ ಸರ್ಕಲ್‌ಗೆ ಹೋದಾಗ ಹೆಬ್ಬಾವು ರಸ್ತೆ ದಾಟುತ್ತಿದ್ದು, ತಕ್ಷಣ ಅದನ್ನು ಹಿಡಿದು ಸಂರಕ್ಷಿಸಿ ಗುರುವಾರ ಬೆಳಿಗ್ಗೆ ನಗರದ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಕನಕಪುರ ವಲಯ ಅರಣ್ಯಾಧಿಕಾರಿ ಕಿರಣ್‌ ಕುಮಾರ್‌ ಮತ್ತು ಉಪ ವಲಯಾರಣ್ಯಾಧಿಕಾರಿ ಚಂದ್ರನಾಯ್ಕ್‌ ಹೆಬ್ಬಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು 6 ಅಡಿ ಉದ್ದದ, 7 ವರ್ಷದ ಕಲ್‌ ಹೆಬ್ಬಾವಾಗಿದ್ದು,  ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮನುಷ್ಯರಿಗೆ ಈ ಹೆಬ್ಬಾವು ತೊಂದರೆ ಮಾಡುವುದಿಲ್ಲ.  ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ, ಇಂತಹ ಹಾವುಗಳು ಕಂಡರೆ ಕೊಲ್ಲದೆ ವನ್ಯಜೀವಿ ಅರಣ್ಯ ಇಲಾಖೆಗೆ ತಿಳಿಸಬೇಕು ಎಂದು ಕನಕಪುರದ ವನ್ಯಜೀವ ವಿಭಾಗದ ವಲಯ ಅರಣ್ಯಾಧಿಕಾರಿ  ಕಿರಣ್‌ಕುಮಾರ್  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.