ADVERTISEMENT

ನರೇಗಾ ಹಣ ದುರ್ಬಳಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 10:36 IST
Last Updated 15 ಜುಲೈ 2017, 10:36 IST

ಕನಕಪುರ: ನರೇಗಾ ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾಮಾಜಿಕ ಲೆಕ್ಕಪರಿಶೋಧನಾ ಅಧಿಕಾರಿ ಕಮಲಾ ಅವರು ತಾಲ್ಲೂಕಿನ ಮುಳ್ಳಳ್ಳಿ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಮುಳ್ಳಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಲೆಕ್ಕಪರಿಶೋಧನೆ ನಡೆಸಲಾಯಿತು.

ಆಗ ಸತ್ತವರ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಹೆಸರಲ್ಲಿ ಕೂಲಿ ಹಣ ಪಡೆದಿರುವ ಹಾಗೂ ಹಣ ಪಡೆದು ಕಾಮಗಾರಿ ಮುಚ್ಚಿರುವ ಮಾಹಿತಿ ಸಭೆಯಲ್ಲಿ ಬಹಿರಂಗಗೊಂಡಿತು. ಪಂಚಾಯಿತಿಯಲ್ಲಿ ಕಳೆದ ಸಾಲಿನಲ್ಲಿ ವಾರ್ಷಿಕವಾಗಿ ₹2ಕೋಟಿಗೂ ಅಧಿಕವಾಗಿ ನರೇಗಾದಲ್ಲಿ ಹಣ ಬಳಸಲಾಗಿದೆ, 540 ಕಾಮಗಾರಿಗಳನ್ನು ಮಾಡಲಾಗಿದೆ.

ಕೆಲವು ಕಾಮಗಾರಿ  ಹಣಕ್ಕಾಗಿಯೇ ಮಾಡಿದ್ದರೆ ಮತ್ತೆ ಕೆಲವು ಕಾಮಗಾರಿಗಳನ್ನು ಯೋಜನೆಯಲ್ಲಿ ಹಣ ಪಡೆದು ಮುಚ್ಚಲಾಗಿದೆ. ಇದು ದುರುದ್ದೇಶದಿಂದ ಕೂಡಿದೆ ಯೋಜನೆ ವಂಚಿಸುವ ಕೆಲಸ ವಾಗಿದೆ ಎಂದು ಲೆಕ್ಕಾಧಿಕಾರಿ ತಿಳಿಸಿದರು.  ಅವ್ಯವಹಾರ ನಡೆದಿರುವ ಬಗ್ಗೆ ಮತ್ತು ವಂಚನೆ ಆಗಿರುವ ಬಗ್ಗೆ ಲೋಪಗಳು ಕಂಡುಬಂದರೆ ತಪ್ಪತಸ್ಥ ಅಧಿಕಾರಿ ಹಾಗೂ ವಂಚನೆಮಾಡಿದ ಫಲಾ ನುಭವಿಗೆ ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು.

ADVERTISEMENT

ವಿಶೇಷ ಗ್ರಾಮ ಸಭೆಯ ನೋಡಲ್‌ ಅಧಿಕಾರಿಯಾಗಿ ಸಣ್ಣ ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್‌ ಮಾತನಾಡಿ ನರೇಗಾ ಅನು ಷ್ಠಾದಲ್ಲಿ ಪಂಚಾಯಿತಿ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಎಚ್ಚರವಹಿಸಬೇಕು, ಯೋಜನೆಯ ಉದ್ದೇಶಕ್ಕೆ ತೊಂದರೆ ಆಗದಂತ ಅರ್ಹ ಫಲಾನುಭವಿಗೆ ಸವಲತ್ತು ದೊರೆಯುವಂತೆ ಎಚ್ಚರವಹಿಸಬೇಕು, ಮುಂದೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕೆಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಭೈರಪ್ಪ, ಉಪಾಧ್ಯಕ್ಷೆ ಮೀನಾಕ್ಷಿ, ಅಭಿವೃದ್ಧಿ ಅಧಿಕಾರಿ ಖಾದರ್‌ಖಾನ್‌, ಟಿ.ಎ.ಪಿ.ಸಿ.ಎಂ.ಎಸ್‌.ಮಾಜಿ ಅಧ್ಯಕ್ಷ ಕೆ.ಎಂ.ರಾಜೇಂದ್ರ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.