ADVERTISEMENT

ನೀರು ಪೂರೈಕೆ ಬಿಲ್‌ ಪಾವತಿ; ಸರ್ಕಾರಕ್ಕೆ ಮೊರೆ

ನಗರಸಭೆ ಸಾಮಾನ್ಯ ಸಭೆ: ಬೀದಿನಾಯಿ ಹಾವಳಿ ನಿಯಂತ್ರಣ, ರಾಜಕಾಲುವೆ ಒತ್ತುವರಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:40 IST
Last Updated 3 ಫೆಬ್ರುವರಿ 2017, 7:40 IST
ರಾಮನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರವಿ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು
ರಾಮನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರವಿ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು   

ರಾಮನಗರ: ಜಿಪಿಎಸ್‌ ಅಳವಡಿಸದೇ ಕುಡಿಯುವ ನೀರು ಪೂರೈಕೆ ಮಾಡಿರುವ ನೀರಿನ ಟ್ಯಾಂಕರ್‌ಗಳ ಮಾಲೀಕರಿಗೆ ಬಿಲ್‌ ಪಾವತಿಸುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಸದಸ್ಯ ಫೈರೂಜ್ ಪಾಷಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ‘ನಿಯಮಾನುಸಾರ ಜಿಪಿಎಸ್‌ ಅಳವಡಿಸಿದ ಟ್ಯಾಂಕರ್‌ಗಳ ನೀರು ಪೂರೈಕೆಗೆ ಮಾತ್ರ ಬಿಲ್‌ ನೀಡಿರುವುದು ಸರಿ. ಆದಾಗ್ಯೂ ಜಿಪಿಎಸ್‌ ಇಲ್ಲದ ಟ್ಯಾಂಕರ್‌ಗಳಿಗೂ ಬಿಲ್ ನೀಡುವ ಸಂಬಂಧ ಮತ್ತೆ ಪ್ರಸ್ತಾವ ಮಾಡಿರುವುದು ಏಕೆ? ಈ ಬಗ್ಗೆ ಅಧ್ಯಕ್ಷರಿಗೆ ಯಾರಿಂದಾದರು ಒತ್ತಡವಿದೆಯೇ?’ ಎಂದು ಪ್ರಶ್ನಿಸಿದರು.

ಆಯುಕ್ತ ಮಾಯಣ್ಣ ಗೌಡ ಪ್ರತಿಕ್ರಿಯಿಸಿ ‘ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ನೀರಿನ ಟ್ಯಾಂಕರ್‌ಗಳ ಜಿಪಿಎಸ್‌ ಕಾರ್ಯನಿರ್ವಹಿಸಿಲ್ಲ. ಅಂತಹ ಟ್ಯಾಂಕರ್‌ಗಳ ಮಾಲೀಕರಿಗೂ ಬಿಲ್‌ ಪಾವತಿಸಬಹುದು ಎಂದು ನಗರಸಭೆಯ 22 ಸದಸ್ಯರು ಒಟ್ಟಾಗಿ ಪತ್ರ ಬರೆದಿದ್ದಾರೆ. ಆದರೆ ನಿಯಮಾನುಸಾರ ಹಾಗೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಕುರಿತು ನಿರ್ದೇಶನ ಕೋರಿ ಸರ್ಕಾರಕ್ಕೆ ಬರೆಯಲಾಗುವುದು’ ಎಂದರು.

ಮುಂದೆ ಬಾರದ ಗುತ್ತಿಗೆದಾರರು: ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಹಲವು ಬಾರಿ ಟೆಂಡರ್‌ ಕರೆದರೂ ಯಾವ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಹೀಗಾಗಿ ಅವುಗಳ ಹಾವಳಿ ನಿಯಂತ್ರಣ ಕಷ್ಟವಾಗಿದೆ’ ಎಂದು ಮಾಯಣ್ಣಗೌಡ ಸಭೆಯ ಗಮನಕ್ಕೆ ತಂದರು.

‘ನಗರದಲ್ಲಿ ಸುಮಾರು 4ಸಾವಿರ  ಬೀದಿ ನಾಯಿಗಳಿವೆ. ಅವುಗಳ ಸಂತಾನಶಕ್ತಿ ಹರಣಕ್ಕೆ ಪ್ರತಿ ಗಂಡು ನಾಯಿಗೆ ₹1600 ಹಾಗೂ ಹೆಣ್ಣು ನಾಯಿಗೆ ₹1800 ದರ ನಿಗದಿಪಡಿಸಲಾಗಿದೆ. ಇದಕ್ಕಾಗಿ ಒಟ್ಟು ₹72 ಲಕ್ಷ ಅಗತ್ಯವಿದೆ. ಈ ಕುರಿತು ಬೆಂಗಳೂರು ಮೂಲದ ‘ಕರುಣ’ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಸಂಪರ್ಕಿಸಿದ್ದು, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಒಪ್ಪಿದ್ದಾರೆ. ಆರಂಭದಲ್ಲಿ 500 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು’ ಎಂದರು. ಹಂದಿಗಳ ಹಾವಳಿ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ರಾಜಕಾಲುವೆ ಒತ್ತುವರಿ ಸಂಬಂಧ ಇನ್ನೂ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಂತೆಯೇ ಪ್ಲಾಸ್ಟಿಕ್‌ ಹಾವಳಿ ನಿಯಂತ್ರಣ, ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ನೀರು ಪೂರೈಕೆ ವ್ಯತ್ಯಯ ಸಂಬಂಧ ಜಲಮಂಡಳಿ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ಕರೆಯುವಂತೆ ಸದಸ್ಯರು ಆಗ್ರಹಿಸಿದರು.

ರಾಜ್ಯೋತ್ಸವಕ್ಕೆ ₹2.3 ಲಕ್ಷ ಬಿಲ್‌:  ‘ನವೆಂಬರ್‌ನಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಾಮಿಯಾನ, ಆಸನ ವ್ಯವಸ್ಥೆಗಾಗಿ ನಗರಸಭೆಯಿಂದ ₹2.3 ಲಕ್ಷ ಮೊತ್ತದ ಬಿಲ್‌ ಪಾವತಿಸಿರುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ‘ಸರ್ಕಾರದ 64 ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆದಿದ್ದರೂ ನಮಗೆ ಮಾತ್ರ ಇದರ ಹೊರೆ ಹೊರಿಸುವುದು ಸರಿಯಲ್ಲ. ಮುಂದೆ ₹1 ಲಕ್ಷದ ಮೇಲಿನ ವೆಚ್ಚಗಳನ್ನು ಇತರ ಇಲಾಖೆಗಳಿಗೆ ಭರಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಬೇಕು’ ಎಂದು ಸದಸ್ಯ ರವಿ ಸಲಹೆ ನೀಡಿದರು.

ಅಂಬೇಡ್ಕರ್‌ ಭವನ ಅಲಭ್ಯ: ಅಂಬೇಡ್ಕರ್‌ ಭವನದ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಮಾರ್ಚ್‌ 31ರವರೆಗೆ ಈ ಭವನವು ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಲಭ್ಯವಾಗಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಉಪಾಧ್ಯಕ್ಷೆ ಸಬೀನಾ ತಾಜ್‌, ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಕಾರ್ಯಕ್ರಮವೇ?
‘ಈ ಬಾರಿ ಗಣರಾಜ್ಯೋತ್ಸವವು ಕಾಂಗ್ರೆಸ್‌ ರಿಪಬ್ಲಿಕ್ ಡೇ ಆಗಿತ್ತು. ಅಲ್ಲಿ ನಗರಸಭೆ ಯಾವೊಬ್ಬ ಸದಸ್ಯರಿಗೂ ಮರ್ಯಾದೆ ಸಿಗಲಿಲ್ಲ’ ಎಂದು ವಿರೋಧಪಕ್ಷದ ಸದಸ್ಯ ಮಂಜುನಾಥ್‌ ಆರೋಪಿಸಿದರು.

ಇದಕ್ಕೆ ಕಾಂಗ್ರೆಸ್‌ ಸದಸ್ಯರಾದ ಚೇತನ್‌ಕುಮಾರ್, ಎಚ್‌.ಎಸ್. ಲೋಹಿತ್‌ ಸಹಿತ ಹಲವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವಾಗ್ವಾದ ನಡೆಯಿತು.
ಮೈಸೂರು ಎಲೆಕ್ಟ್ರಿಕಲ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಶೇಷಾದ್ರಿ ಅಭಿನಂದನೆ ಕಾರ್ಯಕ್ರಮವೂ ಪಕ್ಷಾತೀತವಾಗಿ ನಡೆಯಲಿಲ್ಲ. ಅದು ಕೂಡ ಕಾಂಗ್ರೆಸ್‌ ಕಾರ್ಯಕ್ರಮವೇ ಆಗಿತ್ತು ಎಂದು ಜೆಡಿಎಸ್ ಸದಸ್ಯರು  ಈ ಸಂದರ್ಭದಲ್ಲಿ ದೂರಿದರು.

ADVERTISEMENT

ಕಣ್ಣೀರಿಟ್ಟ ಅಧಿಕಾರಿ
‘ಅಧಿಕಾರಿಗಳು ನಮ್ಮ ಮಾತಿಗೆ ಬೆಲೆ ಕೊಡುವುದೇ ಇಲ್ಲ. ಏಕವಚನದಲ್ಲೇ ಮಾತನಾಡುತ್ತಾರೆ’ ಎಂದು ಸಭೆಯಲ್ಲಿ ಸದಸ್ಯ ಡಿ,ಕೆ. ಶಿವಕುಮಾರ್ ಆರೋಪಿಸಿದರು. ಇದಕ್ಕೆ ಕಣ್ಣೀರಿಡುತ್ತಲೇ ಪ್ರತಿಕ್ರಿಯಿಸಿದ ಕಂದಾಯ ನಿರೀಕ್ಷಕಿ ಶ್ರುತಿ,  ತಾನು ಹಾಗೆ ಮಾತನಾಡಿಲ್ಲ ಎಂದು ದೇವರ ಮೇಲೆ ಆಣೆ ಮಾಡಿದ ಪ್ರಸಂಗವೂ ನಡೆಯಿತು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಬ್ಬರೂ ಸಾರ್ವಜನಿಕರ ಸೇವೆಯಲ್ಲಿದ್ದು, ತಮ್ಮ ಜವಾಬ್ದಾರಿ ಅರಿತು ವರ್ತಿಸಬೇಕು ಎಂದು ಅಧ್ಯಕ್ಷ ರವಿಕುಮಾರ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.