ADVERTISEMENT

ಬಳಕೆಯಾಗದ ನೀರಿನ ಟ್ಯಾಂಕರ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 10:39 IST
Last Updated 1 ಏಪ್ರಿಲ್ 2015, 10:39 IST
ರಾಮನಗರ ನಗರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ಚೇತನ್ ಕುಮಾರ್‌ ವಹಿಸಿದ್ದರು. ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆಯುಕ್ತ ಮಾಯಣ್ಣ ಗೌಡ ಉಪಸ್ಥಿತರಿದ್ದರು
ರಾಮನಗರ ನಗರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ಚೇತನ್ ಕುಮಾರ್‌ ವಹಿಸಿದ್ದರು. ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆಯುಕ್ತ ಮಾಯಣ್ಣ ಗೌಡ ಉಪಸ್ಥಿತರಿದ್ದರು   

ರಾಮನಗರ: ‘ಟ್ರ್ಯಾಕ್ಟರ್, ಟ್ಯಾಂಕರ್ ಕೊಟ್ರೆ ಸಾಕೆ, ಡ್ರೈವರ್, ಡ್ರೈವರ್‌ಗೆ  ವೇತನ, ಟ್ರಾಕ್ಟರ್‌ಗೆ ಇಂಧನ ಎಲ್ಲಿಂದ ತರೋದು, ಅಗತ್ಯ ಸಂಪನ್ಮೂಲ ಕೊಡಿ...’

ನೀರು ಸರಬರಾಜು ಮತ್ತು ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಜಯರಾಂ ಅವರ ಈ ಬೇಡಿಕೆಗೆ ನಗರಸಭಾ ಸದಸ್ಯರು ಕೆಂಡಮಂಡಲರಾಗಿ ಹರಿಹಾಯ್ದ ಪ್ರಕರಣ ನಗರಸಭೆ ಸಾಮಾನ್ಯ ಸಭೆಯಲ್ಲಿ  ನಡೆಯಿತು.

ನಗರದಲ್ಲಿ ನೀರಿನ ಕೊರತೆ ತೀವ್ರವಾಗಿರುವ ಬಡಾವಣೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಇತ್ತೀಚೆಗೆ ನಗರಸಭೆ ವತಿಯಿಂದ ಜಲಮಂಡಳಿಗೆ  ಮೂರು ಟ್ರ್ಯಾಕ್ಟರ್‌ಗಳು ಮತ್ತು ಟ್ಯಾಂಕರ್‌ಗಳನ್ನು ಕೊಡಲಾಗಿದೆ. ಆದರೆ ಈ ಟ್ಯಾಂಕರ್‌ಗಳನ್ನು ಬಳಸದಿರುವ ಬಗ್ಗೆ ಸೋಮವಾರ ನಗರಸಭೆಯ ಪ್ರಶಸ್ತಿ ಭವನದಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿ­ಯಿಸಿದ ಎಇಇ ಜಯರಾಂ ಟ್ಯಾಂಕರ್‌ಗಳಿಗೆ ಸಂಪನ್ಮೂಲದ ಕೊರತೆ ಇರುವುದರಿಂದ ಬಳಸಲಾಗುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌  ಅವರು ನೀಡಿದ  ಸಮಜಾಯಿಷಿಗೆ ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀರಿನ ಕರ ವಸೂಲಿ ಸೇರಿದಂತೆ ಜಲ ಮಂಡಳಿಗೆ ಸಾಕಷ್ಟು ಆದಾಯವಿದೆ. ಹೀಗಿದ್ದರೂ ಸಂಪನ್ಮೂಲದ ಕೊರತೆ ಮುಂದಿಟ್ಟು, ಹೊಣೆಗಾರಿಕೆಯಿಂದ ಜಾರಿಕೊಳ್ಳಬೇಡಿ. ಸಭೆಗೆ ಉಡಾಫೆ ಉತ್ತರ ನೀಡುವ ಬದಲು ನೀರಿನ ಬವಣೆ ನೀಗಿಸಲು ಮುಂದಾಗಿ ಎಂದು ಅಧ್ಯಕ್ಷ ಚೇತನ್ ಕುಮಾರ್ ಮತ್ತು ಆಯುಕ್ತ ಮಾಯಣ್ಣ ಗೌಡ ಸೂಚಿಸಿದರು.

ಕೇವಲ ಚರ್ಚೆಗೆ ಸೀಮಿತವಾದ ಸರ್ಕಾರಿ ಆಸ್ತಿ ಒತ್ತುವರಿ: ನಗರಸಭಾ ವ್ಯಾಪ್ತಿಯಲ್ಲಿ ರಾಜಕಾಲುವೆ, ಸರ್ಕಾರಿ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ನಗರಸಭೆಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತಾದರೂ ಸ್ಪಷ್ಟ ನಿರ್ಧಾರ ತೆಗೆದಕೊಳ್ಳಲು ಸಭೆಯಲ್ಲಿ ಸಾಧ್ಯವಾಗಲಿಲ್ಲ.  ಸದಸ್ಯ ರವಿ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ಯಾಗಿದೆ. ಕೆಲವು ಕಡೆ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿವೇಶನ ಕಟ್ಟಡ ನಿರ್ಮಿಸಿ ಖಾತೆ ಮಾಡಿಕೊಡುವಂತೆ ನಗರಸಭೆಗೆ ಅರ್ಜಿಗಳು ಬಂದಿವೆ ಎಂದು  ಅವರು ದೂರಿದರು.

ಸರ್ಕಾರಿ ಜಾಗ ಒತ್ತುವರಿ ಮತ್ತು ರಾಜಕಾಲುವೆ ಒತ್ತುವರಿ ಕುರಿತು ಸಮೀಕ್ಷೆ ನಡೆಯಲಿ ಎಂದು ಆಗ್ರಹಿಸಿದರು. ಪ್ರಭಾವಕ್ಕೆ ಮಣಿಯದೆ ಒತ್ತುವರಿ ತೆರವು ಮಾಡಿ ಎಂದರು. ರವಿ ಅವರ ಆಗ್ರಹಕ್ಕೆ ಬಹುತೇಕ ಸದಸ್ಯರು ದನಿಗೂಡಿಸಿದರು.

ನಗರಸಭೆಯ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರಿಸಿಕೊಳ್ಳುವ ವಿಷಯದಲ್ಲಿ ಕಳೆದ ಸಭೆಯಲ್ಲಿ ಅಂಗೀಕಾರವಾಗಿರುವ ನಿರ್ಣಯದ ಬಗ್ಗೆ ತಕರಾರು ಎತ್ತಿದ ಜೆಡಿಎಸ್ ಸದಸ್ಯರು ಇದು ನಿಯಮಾನುಸಾರ ನಡೆದಿಲ್ಲ ಎಂದರು. ಜೆ ಡಿ ಎಸ್ ಸದಸ್ಯರ ಆಕ್ಷೇಪಕ್ಕೆ ಮಾಜಿ ಅಧ್ಯಕ್ಷ ಆರಿಫ್ ಖುರೇಷಿ ವಿರೋಧ ವ್ಯಕ್ತಪಡಿಸಿದರು.

ಹೆಚ್ಚುವರಿ ಅನುದಾನ, ಸರ್ಕಾರಕ್ಕೆ ಬೇಡಿಕೆ: ಸರ್ಕಾರದಿಂದ ಕನಕಪುರಕ್ಕೆ ಕೋಟ್ಯಂತರ ರೂಪಾಯಿ ವಿಶೇಷ ಆನುದಾನ ಹರಿದು ಹೋಗುತ್ತಿದೆ. ರಾಮನಗರಕ್ಕೂ ವಿಶೇಷ ಅನುದಾನ ತರುವ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯುವ ಅಗತ್ಯವನ್ನು ಕೆಲವು ಸದಸ್ಯರು ವ್ಯಕ್ತಪಡಿಸಿದರು. ವಿಶೇಷ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಲು ಸಭೆ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.