ADVERTISEMENT

ಬಿಡದಿ: ಶೀಘ್ರ ಆಶ್ರಯ ನಿವೇಶನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2015, 10:47 IST
Last Updated 21 ಏಪ್ರಿಲ್ 2015, 10:47 IST

ರಾಮನಗರ:  ಬಿಡದಿ ಹೋಬಳಿಯಲ್ಲಿ ಬಡವರಿಗೆ ಶೀಘ್ರ ಆಶ್ರಯ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಬಿಡದಿ ಹೋಬಳಿಯ ಹೆಜ್ಜಾಲ, ಜುಟ್ಟನಹಳ್ಳಿ ಹಾಗೂ ಪರಸುಪಾಳ್ಯದಲ್ಲಿ ₨ 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಮೂರು ಅಂಗಡಿವಾಡಿ ಕಟ್ಟಡ ಹಾಗೂ ಓವರ್ ಟ್ಯಾಂಕ್ ಅನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಈ ಭಾಗದಲ್ಲಿ ಕಂದಾಯ ಜಮೀನು ಅರಣ್ಯ ಇಲಾಖೆಯಲ್ಲಿರುವ ವಶದಲ್ಲಿರುವ ಬಗ್ಗೆ ಮಾಹಿತಿ ಇದೆ. ಅಧಿಕಾರಿಗಳಿಂದ ಸರ್ವೆ ಮಾಡಿಸಲಾಗಿದೆ. ಅತಿ ಶೀಘ್ರ ಜಾಗಗಳನ್ನು ವಿಂಗಡಣೆ ಮಾಡಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಅವರು ಹೇಳಿದರು.

ಗ್ರಾಮೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರದಿಂದಲೂ ಗ್ರಾ.ಪಂ. ಪಂಚಾಯ್ತಿಗಳಿಗೆ ನೇರ ಅನುದಾನ ಬಿಡುಗಡೆ ಆಗುತ್ತಿದ್ದು, ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚಿನ ಒತ್ತು ನೀಡಬೇಕು. ಸಂಸದರ ನಿಧಿಯನ್ನು ಹೆಚ್ಚಿನ ಅಗತ್ಯತೆ ಇರುವ ಕಡೆ ಅದು ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆೆ ಮಾಡುವುದಾಗಿ ಅವರು ತಿಳಿಸಿದರು.

ಹಳ್ಳಿಗಾಡಿನ ಸಂಸ್ಕೃತಿಯನ್ನು ಉಳಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಇಡೀ ಗ್ರಾಮ ಪಂಚಾಯ್ತಿಯನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ನಮ್ಮ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿಲ್ಲ ಎಂಬ ಆತಂಕ ಯಾರಿಗೂ ಬೇಡ. ಯೋಜನೆಯ ಮಾರ್ಗಸೂಚಿ ಪ್ರಕಾರ ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಯಾವುದೇ ವಿಶೇಷ ಅನುದಾನ ಬರುವುದಿಲ್ಲ. ಇದೇ ರೀತಿ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಮ್ಮ, ಕೆಪಿಸಿಸಿ ಸದಸ್ಯ ಎ.ಮಂಜು, ತಾಲ್ಲೂಕು ಪಂಚಾಯಿತಿ  ಅಧ್ಯಕ್ಷೆ ಶೋಭಾ ಲಕ್ಷ್ಮಣ್ಕುಮಾರ್, ಮಂಚನಾಯಕನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟಾಚಲಪತಿ, ಸದಸ್ಯರಾದ ಶಾಂತರಾಜು, ಎಸ್ಆರ್ಎಸ್ ರಾಜು, ಮಾಜಿ ಸದಸ್ಯ ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.