ADVERTISEMENT

‘ಮಾನಸಿಕ ಸಮಸ್ಯೆ; ಸೂಕ್ತ ಚಿಕಿತ್ಸೆ ಅವಶ್ಯ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 6:28 IST
Last Updated 8 ಏಪ್ರಿಲ್ 2017, 6:28 IST
ರಾಮನಗರದಲ್ಲಿ ಶುಕ್ರವಾರ ನಡೆದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಆರ್. ಮಮತಾ ಕೈಪಿಡಿ ಬಿಡುಗಡೆ ಮಾಡಿದರು. ಡಿಎಚ್‌ಒ ಶಿವರಾಜ್ ಹೆಡೆ, ಮನೋವೈದ್ಯ ಎಂ.ಎಸ್‌. ಆದರ್ಶ್‌ ಇತರರು ಇದ್ದರು
ರಾಮನಗರದಲ್ಲಿ ಶುಕ್ರವಾರ ನಡೆದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಆರ್. ಮಮತಾ ಕೈಪಿಡಿ ಬಿಡುಗಡೆ ಮಾಡಿದರು. ಡಿಎಚ್‌ಒ ಶಿವರಾಜ್ ಹೆಡೆ, ಮನೋವೈದ್ಯ ಎಂ.ಎಸ್‌. ಆದರ್ಶ್‌ ಇತರರು ಇದ್ದರು   

ರಾಮನಗರ: ‘ಜನರು ಹಿಂಜರಿಕೆಯ ಮನೋಭಾವ ಬಿಟ್ಟು ವೈದ್ಯರ ಬಳಿ ತಮ್ಮ ಮಾನಸಿಕ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಈ ಮೂಲಕ ಖಿನ್ನತೆಯಿಂದ ಹೊರ ಬರಬೇಕು’ ಎಂದು ಜಿಲ್ಲಾಧಿಕಾರಿ ಬಿ.ಆರ್. ಮಮತಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ರೋಟರಿ ಸಿಲ್ಕ್‌ ಸಿಟಿಯ ಸಹಯೋಗದಲ್ಲಿ ನಗರದ ಅರ್ಕಾವತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈಚಿನ ದಿನಗಳಲ್ಲಿ ಬಹುತೇಕ ಮಂದಿ ಒತ್ತಡದಲ್ಲಿ ಜೀವನ ಸಾಗಿಸು ತ್ತಿದ್ದು, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕಿಂತ ನಗರದಲ್ಲಿರುವವರು ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ ಪ್ರತಿ 100 ಮಂದಿಯಲ್ಲಿ 15 ಜನರು ಒತ್ತಡಕ್ಕೆ ಸಿಲುಕಿದ್ದಾರೆ. ಅದರಲ್ಲೂ ಮಹಿಳೆಯರೇ ಹೆಚ್ಚು ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಇಂದಿನ ದಿನಗಳಲ್ಲಿ ಮನುಷ್ಯನನ್ನು ಕಷ್ಟ, ದುಃಖ, ಭಯ, ನೋವು, ಗೊಂದಲ, ಒತ್ತಡಗಳು ಸುತ್ತಿಕೊಂಡಿವೆ. ಯಾವುದೇ ಸಮಸ್ಯೆ ಎದುರಾದಾಗ ಆತಂಕಕ್ಕೆ ಒಳಗಾಗದೆ, ಕುಗ್ಗದೆ ಧೈರ್ಯದಿಂದ ಸಮಸ್ಯೆ ಬಗೆಹರಿಸಿ ಕೊಳ್ಳಬೇಕು. ಕೀಳರಿಮೆ ಮನೋಭಾವದಿಂದ ಹೊರಬಂದು ಎಲ್ಲರೊಡನೆ ಸ್ನೇಹ–ವಿಶ್ವಾಸದಿಂದರಬೇಕು’ ಎಂದರು.

‘ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಗಳಿಗೆ ಹಿಂಸೆ ನೀಡುವುದು, ಹೊಡೆಯುವುದು, ಬಂಧಿಸುವುದನ್ನು ಮಾಡಬಾರದು. ಅವರ ಹಕ್ಕುಗಳನ್ನು ದುರುಪಯೋಗ ಮಾಡಿಕೊಂಡರೆ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು’ ಎಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ್‌ ಹೆಡೆ ಮಾತನಾಡಿ ‘ವಿಶ್ವ ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ಎಲ್ಲರ ಗಮನ ಸೆಳೆಯಲು, ಪ್ರತಿ ವರ್ಷ ಏ.7ರಂದು ವಿಶ್ವ ಆರೋಗ್ಯ ಸಂಸ್ಥೆಯ ಮುಂದಾಳತ್ವದಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. 2017ನೇ ವರ್ಷದಲ್ಲಿ ‘ಖಿನ್ನತೆ, ಬೇಜಾರು ಕಾಯಿಲೆ–ನಾವು ಮಾತಾಡೋಣ’ ಎಂಬುದು ಘೋಷಣಾ ವಾಕ್ಯವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ತರಬೇತಿಯನ್ನು ನೀಡಿ ಮಾನಸಿಕ ಕಾಯಿಲೆಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ನೀಡಲು ಶಕ್ತರನ್ನಾಗಿ ಮಾಡಲಾಗಿದೆ. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಂಗಳವಾರದಂದು ಮನೋವೈದ್ಯರು ಲಭ್ಯರಿರುತ್ತಾರೆ ಎಂದು ತಿಳಿಸಿದರು.

ತಜ್ಞ ಮನೋವೈದ್ಯ ಡಾ.ಎಂ.ಎಸ್‌. ಆದರ್ಶ್‌ ಉಪನ್ಯಾಸ ನೀಡಿ ‘ಖಿನ್ನತೆ ಕಾಯಿಲೆಯು ಸಾಮಾನ್ಯ ಮಾನಸಿಕ ಕಾಯಿಲೆಯಾಗಿದೆ. ಎಲ್ಲಾ ದೇಶಗಳ ಎಲ್ಲಾ ಸ್ತರಗಳ, ಎಲ್ಲಾ ವಯಸ್ಸಿನ ವ್ಯಕ್ತಿಗಳನ್ನು ಇದು ಬಾಧಿಸುತ್ತದೆ. ಖಿನ್ನತೆಯನ್ನು ಗುಣಪಡಿಸಬಹುದು’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್. ಹೊನ್ನಸ್ವಾಮಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಂ.ಕೆ. ಮುನಿರಾಜು, ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಜೆ. ವಿಜಯನರಸಿಂಹ, ಆರ್‌ಸಿಎಚ್ ಅಧಿಕಾರಿ ಡಾ.ಆರ್.ಎನ್. ಲಕ್ಷ್ಮೀಪತಿ, ರೋಟರಿ ಸಿಲ್ಕ್‌ ಸಿಟಿ ಅಧ್ಯಕ್ಷ ಬಿ. ಗೋಪಾಲ್‌, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪದ್ಮಾವತಿ ಇತರರು ಇದ್ದರು.

ಗಾಯಕ ಶ್ರೀನಿವಾಸ್ ಮತ್ತು ತಂಡದವರು ಪ್ರಾರ್ಥಿಸಿದರು. ಎಸ್. ಪದ್ಮರೇಖಾ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವರಾಜ್‌ ನಿರೂಪಿಸಿದರು.
ಜಾಥಾ: ಇದಕ್ಕೂ ಮುನ್ನ ಆರೋಗ್ಯ ದಿನದ ಅಂಗವಾಗಿ ನಡೆದ ಜಾಗೃತಿ ಜಾಥಾಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರಕಾಶ್‌ ನಾಡಿಗೇರ್‌ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.