ADVERTISEMENT

ಮುಂದುವರಿದ ಅದಿವಾಸಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:31 IST
Last Updated 27 ಮೇ 2017, 9:31 IST

ರಾಮನಗರ: ಆದಿವಾಸಿ ಜನರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ನಡೆದಿರುವ ಧರಣಿಯು ಮೂರನೇ ದಿನವಾದ ಶುಕ್ರವಾರವೂ ಮುಂದುವರಿಯಿತು.

ಧರಣಿ ನಿರತರು ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿ, ಅಲ್ಲಿಯೇ ವಿಶ್ರಮಿಸಿದರು. ತಮಟೆ ಸದ್ದು ಮಾಡುತ್ತಾ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಪೊಲೀಸರ ಕಾವಲಿನಲ್ಲಿ ಧರಣಿ ಮುಂದುವರಿದಿದ್ದು, ನಗರಸಭೆ ವತಿಯಿಂದ ನೀರು ಪೂರೈಕೆ ಮಾಡಲಾಗಿತ್ತು.

‘310 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದ್ದು, ಉಳಿದ ಅರ್ಜಿಗಳ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿದೆ. ಸರ್ವೆ ಕಾರ್ಯ ನಡೆದು ಆರೇಳು ತಿಂಗಳು ಕಳೆದರೂ ಇನ್ನೂ ಹಕ್ಕುಪತ್ರ ವಿತರಿಸಿಲ್ಲ. ತನ್ನ ಭರವಸೆಯ ಬಗ್ಗೆ ಲಿಖಿತವಾಗಿ ಹೇಳಿಕೆ ನೀಡಿದಲ್ಲಿ ಧರಣಿ ಕೈಬಿಡುತ್ತೇವೆ’ ಎಂದು ಪ್ರತಿಭಟನಾಕಾರರು ಹೇಳಿದರು.ವಿವಿಧ ಸಂಘಟನೆಗಳ ಮುಖಂಡರಾದ ಕೃಷ್ಣಮೂರ್ತಿ, ಗೋವಿಂದರಾಜು, ಶಿವು, ನಾಗರಾಜು ಮತ್ತಿತರರು  ಇದ್ದರು.

ADVERTISEMENT

ಗೇಟಿಗೆ ಬೀಗ: ಆಕ್ಷೇಪ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಗೇಟುಗಳಿಗೆ ಬೀಗ ಹಾಕಲಾಗಿದ್ದು. ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು.

ಇದರಿಂದ ವಾಹನಗಳು ಹೆದ್ದಾರಿಯ ಪಕ್ಕದಲ್ಲಿಯೇ ನಿಲುಗಡೆ ಆಗುತ್ತಿದ್ದು, ಜನರು ಕಿರಿಕಿರಿ ಅನುಭವಿಸುವಂತಾಗಿದೆ. ಸರ್ಕಾರಿ ಕಚೇರಿಗಳ ಪ್ರವೇಶಕ್ಕೆ ತಡೆ ಒಡ್ಡುವುದು ಸರಿಯಲ್ಲ. ಗೇಟಿನ ಒಳಗೆ ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.