ADVERTISEMENT

ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ವಿಫಲ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2014, 9:19 IST
Last Updated 23 ಸೆಪ್ಟೆಂಬರ್ 2014, 9:19 IST

ರಾಮನಗರ:  ‘ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕವೇ ಆಗಿದ್ದರೂ ಸರ್ಕಾರಿ ಶಾಲಾ ಮತ್ತು ಕಾಲೇಜುಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರದ ಇಚ್ಚಾಶಕ್ತಿ ಕೊರತೆ ಪ್ರಮುಖವಾಗಿ ಕಾಣುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ 2014–15ನೇ ಸಾಲಿನ ವಿದ್ಯಾರ್ಥಿ ಸಂಘ, ಕ್ರಿಡಾ ಸಂಘದ ಉದ್ಘಾಟನೆ ಹಾಗೂ ಶಿಕ್ಷಕರ ಮತ್ತು ಎಂಜಿನಿಯರ್‌ಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಕಾಲೇಜುಗಳು ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಿ, ಬೋಧಕ ಸಿಬ್ಬಂದಿಯನ್ನು ಒದಗಿಸುತ್ತಿವೆ. ಆದರೆ ಅದಕ್ಕೆ ತಕ್ಕ ಪೈಪೋಟಿ ಕೊಟ್ಟು, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬೇಕಾದ ಸರ್ಕಾರಿ ಕಾಲೇಜುಗಳಲ್ಲಿ ಕಟ್ಟಡ ಕೊರತೆ, ತರಗತಿ ಕೊರತೆ, ಪೀಠೋಪಕರಣ ಕೊರತೆ ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ನಾನು ಮುಖ್ಯಮಂತ್ರಿ ಆಗಿದ್ದ 20 ತಿಂಗಳ ಅವಧಿಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದೆ. ನನ್ನ ಅವಧಿಯಲ್ಲಿ 189 ಸರ್ಕಾರಿ ಪದವಿ ಕಾಲೇಜುಗಳನ್ನು ಸ್ಥಾಪಿಸಲಾಯಿತು. ಅದಕ್ಕೂ ಮೊದಲು ಸ್ವಾತಂತ್ರ್ಯ ಬಂದಾಗಿನಿಂದ ರಾಜ್ಯದಲ್ಲಿ ಇದ್ದಿದ್ದು ಕೇವಲ 169 ಕಾಲೇಜುಗಳು’ ಎಂದು ಅವರು ಹೇಳಿದರು.

‘ಅಲ್ಲದೆ ಹಲವು ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳು ನನ್ನ ಅವಧಿಯಲ್ಲಿ ಸ್ಥಾಪನೆಯಾದವು. ಹೀಗೆ ಸ್ಥಾಪನೆಯಾದ ಕಾಲೇಜುಗಳಿಗೆ ನನ್ನ ಅವಧಿಯಲ್ಲಿಯೇ ಕಟ್ಟಡ ಮತ್ತು ಮೂಲ ಸೌಕರ್ಯ ಒದಗಿಸಲು ತಲಾ ಎರಡರಿಂದ ಮೂರು ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಅಲ್ಲದೆ 55 ಸಾವಿರ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಲಾಯಿತು’ ಎಂದು ಅವರು ಸ್ಮರಿಸಿದರು.

ಏಳು ವರ್ಷವಾದರೂ ಕಟ್ಟಡ ಕಟ್ಟಿಲ್ಲ: ರಾಮನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ ಕಟ್ಟಡ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಆಗಲೇ ಹಣ ಬಿಡುಗಡೆ ಆಗಿದೆ. ಆದರೆ ಏಳು ವರ್ಷ ಕಳೆದರೂ ಕಟ್ಟಡ ನಿರ್ಮಾಣ ಆಗಿಲ್ಲ. ಸರ್ಕಾರಿ ಅಧಿಕಾರಿಗಳು ಜಾನ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವ ಕಾರಣ ವಿದ್ಯಾ ರ್ಥಿಗಳು ಸಮಸ್ಯೆ ಎದುರಿಸು ವಂತಾಗಿದೆ ಎಂದು ಅವರು ಕಿಡಿಕಾರಿದರು.

‘ಈ ಕುರಿತು ಅಧಿಕಾರಿ ವರ್ಗದ ಜತೆ ಹತ್ತಾರು ಬಾರಿ ಸ್ವತಃ ನಾನೇ ಮಾತ ನಾಡಿದ್ದೇನೆ. ಆದರೆ ಅವರಾ್ಯರಿಗೂ ನಿಜವಾದ ಕಾಳಜಿ ಇಲ್ಲ. ಇಚ್ಚಾಶಕ್ತಿಯೂ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. ತಾಂತ್ರಿಕವಾಗಿ ದೇಶ ಎಷ್ಟೇ ಪ್ರಗತಿ ಕಂಡಿದ್ದರೂ ದೇಶದಲ್ಲಿ ಕಿತ್ತು ತನ್ನುವ ಬಡತನ ಇದೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಇದನ್ನು ಪರಿಹರಿಸಲು ಇರುವ ಏಕೈಕ ಮಾರ್ಗ ಶಿಕ್ಷಣ. ಆದರೆ ಸರ್ಕಾರದಿಂದ ಇದಕ್ಕೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಿದರು.

ಒಂದು ಹೆಜ್ಜೆಯೂ ಮುಂದಕ್ಕೆ ಹೋಗಿಲ್ಲ: ‘ನಾನು ಸಿ.ಎಂ ಆಗಿದ್ದಾಗ ಜಿಲ್ಲೆಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ (ಆರ್‌ಜಿ ಯುಎಚ್‌ಎಸ್‌) ಸ್ಥಾಪಿಸಲು ಆದೇಶಿಸಿದ್ದೆ. ಇದು ಅಂದಾಜು ರೂ 350 ಕೋಟಿ ವೆಚ್ಚದ ಯೋಜನೆ. ವಿಶ್ವ ವಿದ್ಯಾಲಯ ರೂ 120 ಕೋಟಿ, ಕೇಂದ್ರ ಸರ್ಕಾರ 110 ಕೋಟಿ, ರಾಜ್ಯ ಸರ್ಕಾರ ರೂ 50 ಕೋಟಿ ವಿನಿಯೋಗಿಸುತ್ತಿತ್ತು. ಇದರಿಂದ ವೈದ್ಯಕೀಯ ಕಾಲೇಜು, 1000 ಹಾಸಿಗೆ ಆಸ್ಪತ್ರೆ, ನರ್ಸಿಂಗ್‌ ಕಾಲೇಜು ಜಿಲ್ಲೆಗೆ ಬರುತ್ತಿತ್ತು. ಆದರೆ ನಂತರ ಬಂದ ಸರ್ಕಾರಗಳು ಈ ಬಗ್ಗೆ ಒಂದೇ ಒಂದು ಹೆಜ್ಜೆ ಮುಂದಕ್ಕೆ ಹೋಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ಸರ್ಕಾರಿ ಜಿಲ್ಲಾ ಆಸ್ಪತ್ರೆ ನಿರ್ಮಿಸಲು ನನ್ನ ಅವಧಿಯಲ್ಲಿ ರೂ 30 ಕೋಟಿ ಒದಗಿಸಲಾಗಿತ್ತು. ಈ ಹಣ ವನ್ನು ಆರು ವರ್ಷವಾದರೂ ವಿನಿ ಯೋಗಿಸಿಲ್ಲ. ಆಸ್ಪತ್ರೆ ನಿರ್ಮಾಣ ವಾಗಿಲ್ಲ. ಈ ಹಣವನ್ನು ಎಫ್‌.ಡಿ ಇಟ್ಟಿರುವ ಕಾರಣ ಅದು ರೂ 39 ಕೋಟಿ ಆಗಿದೆ. ಈ ಯೋಜನೆ ಅನುಷ್ಠಾನದ ನಿಟ್ಟಿನಲ್ಲೂ ಸರ್ಕಾರ ಒಂದು ಹೆಜ್ಜೆಯೂ ಮುಂದಕ್ಕೆ ಹೋಗಿಲ್ಲ ಎಂದು ಕಿಡಿಕಾರಿದರು.

ಜಿಲ್ಲೆಗೆ ಆರ್‌ಜಿಯುಎಚ್‌ಎಸ್‌ ಬಂದಿದ್ದರೆ ಜಿಲ್ಲೆ ಇನ್ನಷ್ಟು ಪ್ರಗತಿ ಹೊಂದುತ್ತಿತ್ತು. ಆದರೆ ಕೆಲವರು ಇದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಬಡವರಿಗೆ ಒಂದೊಂದು ನಿವೇಶನ ಹಂಚುವುದೂ ಕಷ್ಟವಾಗಿರುವ ಈ ಕಾಲದಲ್ಲಿ ಕೋಟ್ಯಂತರ ರೂಪಾಯಿ ವಿನಿಯೋಗಿಸಿ ಮಾಡುವ ಸ್ಮಾರ್ಟ್‌ ಸಿಟಿ ಯೋಜನೆ ಅಪ್ರಸ್ತುತವಾಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಸೈಯದ್ ಮುದೀರ್‌ ಆಗಾ, ಕಾಲೇಜಿನ ಪ್ರಾಂಶು ಪಾಲ ಎಲ್‌. ಚಂದ್ರಶೇಖರ್‌, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶು ಪಾಲ ಡಾ.ಜಿ.ಪುಂಡರೀಕ, ಜಿ.ಪಂ. ಸದಸ್ಯ ರಾಜಣ್ಣ, ತಾ. ಪಂ. ಸದಸ್ಯ ವೆಂಕಟ ರಂಗಯ್ಯ, ವಿದ್ಯಾರ್ಥಿ ಕ್ಷೇಮಾ ಭಿವೃದ್ಧಿ ಅಧಿಕಾರಿ ವೈ.ಎಚ್‌. ಪೂರ್ಣಿಮಾ, ಉಪನ್ಯಾಸಕ ಕೆ. ವೆಂಕಟೇಶ್‌ ಮೂರ್ತಿ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಸಿ.ಬಸವೇಗೌಡ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.