ADVERTISEMENT

ಮೃತಪಟ್ಟ ಕಾಡಾನೆಗೆ ಗ್ರಾಮಸ್ಥರಿಂದ ತಿಥಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 7:13 IST
Last Updated 25 ಏಪ್ರಿಲ್ 2017, 7:13 IST
ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ದೇವಿರಮ್ಮನದೊಡ್ಡಿ ಗ್ರಾಮದಲ್ಲಿ ಮೃತ ಕಾಡಾನೆಗೆ ಗ್ರಾಮಸ್ಥರು ತಿಥಿ ಕಾರ್ಯ ನೆರವೇರಿಸಿದರು
ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ದೇವಿರಮ್ಮನದೊಡ್ಡಿ ಗ್ರಾಮದಲ್ಲಿ ಮೃತ ಕಾಡಾನೆಗೆ ಗ್ರಾಮಸ್ಥರು ತಿಥಿ ಕಾರ್ಯ ನೆರವೇರಿಸಿದರು   

ಸಾತನೂರು (ಕನಕಪುರ): ತಾಲ್ಲೂಕಿನ ಸಾತನೂರು ಹೋಬಳಿ ದೇವಿರಮ್ಮನದೊಡ್ಡಿ ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ಕಾಡಾನೆಗೆ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನಗಳಂತೆ ಸೋಮವಾರ ತಿಥಿ ಕಾರ್ಯ ನೆರವೇರಿಸಿದರು.

ಏ.13ರಂದು ಕಾಡಾನೆ ನೀರು ಕುಡಿಯಲು ಬಂದು ಅಸ್ವಸ್ಥಗೊಂಡು ಚಿಕಿತ್ಸೆಗೆ ಸ್ಪಂದಿಸದೆ  ಮೃತಪಟ್ಟಿತ್ತು. ಆನೆ ಸತ್ತ ಕೃಷ್ಣೇಗೌಡ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ  ಮಾಡಲಾಯಿತು.

ದೇವಿರಮ್ಮನದೊಡ್ಡಿ ಮತ್ತು ಚಿಕ್ಕಾಲಹಳ್ಳಿ ಗ್ರಾಮಸ್ಥರು ಜತೆಗೂಡಿ ನೆರವೇರಿಸಿದ ತಿಥಿ ಕಾರ್ಯದಲ್ಲಿ  ಆನೆಗೆ ಇಷ್ಟವಾದ ತಿನಿಸು, ಹಣ್ಣುಗಳನ್ನು ಇಟ್ಟು ಪೂಜಾ ಕಾರ್ಯ ನೆರವೇರಿಸಿದರು.

ADVERTISEMENT

ನಂತರ ಗ್ರಾಮದಲ್ಲಿ ಒಂದು ಸಾವಿರ ಜನಕ್ಕೆ ಪಲಾವ್, ಅನ್ನಸಾಂಬಾರ್‌, ಹೆಸರುಬೇಳೆ ಪಾಯಿಸ ಊಟದ ವ್ಯವಸ್ಥೆ ಮಾಡಲಾಗಿತ್ತು.  ಮದುವೆ ಸಮಾರಂಭಗಳಲ್ಲಿ ಜನರು ಊಟಕ್ಕೆ ಹೋಗುವಂತೆ ಎರಡೂ ಗ್ರಾಮದ ಜನರು ಪಂಕ್ತಿಯಲ್ಲಿ ಕುಳಿತು ಭೋಜನ ಸವಿದರು.

ತಿಮ್ಮೇಗೌಡ, ರವಿಕುಮಾರ್‌, ಗೋವಿಂದರಾಜು, ಕೃಷ್ಣೇಗೌಡ ಸೇರಿದಂತೆ ಗ್ರಾಮದ ಮುಖಂಡರು ನೇತೃತ್ವ ವಹಿಸಿದ್ದರು.

ಆಕ್ರೋಶ: ‘ಕಾಡಾನೆ ಮತ್ತು ಕಾಡು ಪ್ರಾಣಿಗಳು ಸಾರ್ವಜನಿಕರಿಗಿಂತ ಅರಣ್ಯ ಇಲಾಖೆ ಮತ್ತು ಅಧಿಕಾರಿಗಳಿಗೆ ಹೆಚ್ಚು ಪ್ರೀತಿ ಪಾತ್ರವಾದವು. ಅವುಗಳ ಸಾವಿಗೆ ಹೆಚ್ಚು ಮರುಗಬೇಕಾದುದು ಅರಣ್ಯಾಧಿಕಾರಿಗಳೇ. ಆದರೆ, ತಿಥಿ ಕಾರ್ಯಕ್ಕೆ ಬರುವಂತೆ ಕರಪತ್ರ ನೀಡಿದ್ದರೂ, ಯಾವೊಬ್ಬ ಅಧಿಕಾರಿಯು ಬಂದಿಲ್ಲ. ₹ 5 ಸಾವಿರ ಹಣ ಕೊಡುವುದಾಗಿ ಹೇಳಿ ವಂಚಿಸಿದ್ದಾರೆ’ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಆನೆ ಸಾವನಪ್ಪಿದೆ. ಇದಕ್ಕೆ ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನ ಕಾರಣ ಎಂದು ಚಿಕ್ಕಾಲಹಳ್ಳಿ ಗ್ರಾಮದ ಶಿವಾನಂದ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.