ADVERTISEMENT

ರಸ್ತೆ ಬದಿ ಗುಂಡಿ ಮುಚ್ಚಿ ‘ಸುರಕ್ಷತಾ ಸಪ್ತಾಹ’

ಮಾಗಡಿ ತಾವರೆಕೆರೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 8:49 IST
Last Updated 20 ಮಾರ್ಚ್ 2017, 8:49 IST

ಮಾಗಡಿ: ಸಮಾಜದ ಮುಖ್ಯ ಅಂಗವಾಗಿರುವ ಪೊಲೀಸರು ಸಹಜವಾಗಿ ಮಾನವೀಯತೆಯ ಗುಣಗಳನ್ನು ರೂಪಿಸಿಕೊಂಡು ಸಮಾಜದ ನಡುವೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಎಚ್‌.ಎಲ್‌.ನಂದೀಶ್‌ ತಿಳಿಸಿದರು.

ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ಭಾನುವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ರವಿ ಹಾಗೂ ಪೊಲೀಸ್‌ ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಜಲ್ಲಿಕಲ್ಲು ಖರೀದಿಸಿ ರಸ್ತೆ ಬದಿಯ ಅಪಾಯಕಾರಿ ಗುಂಡಿ ಮುಚ್ಚುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಾಜದ ಸುರಕ್ಷತೆ ಮತ್ತು ಶಾಂತಿ ಹಾಗೂ ಸೌಹಾರ್ದಯುತವಾಗಿ ಬದುಕು ರೂಪಿಸುವುದೇ ನಮ್ಮ ಇಲಾಖೆಯ ಪ್ರಮುಖ ಗುರಿಯಾಗಿದೆ. ತಾವರೆಕೆರೆ ರಸ್ತೆಯ ಬದಿಯಲ್ಲಿ ಎರಡು ಮೂರು ಅಡಿ ಗುಂಡಿಗಳು ಬಿದ್ದು 6 ತಿಂಗಳಾಯಿತು. ನಿತ್ಯ ಗುಂಡಿಗೆ ವಾಹನಗಳು ಉರುಳಿ ಬಿದ್ದು ಅಪಘಾತಗಳು ಸಂಭವಿಸುವುದನ್ನು ಗಮನಿಸಿದ ಪೊಲೀಸರು ಗುಂಡಿ ಮುಚ್ಚಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು.

ಚಾಲಕರು ಕಡ್ಡಾಯವಾಗಿ ವೇಗದ ಮಿತಿಯಲ್ಲಿ ವಾಹನ ಚಲಾಯಿಸಬೇಕು. ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಕೇಳಿದಾಗ ತೋರಿಸಬೇಕು ಎಂದು  ತಿಳಿಸಿದರು.

ಪಿಎಸ್‌ಐ ರವಿ ಮಾತನಾಡಿ, ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ದಾಸರವಾಣಿಯಂತೆ, ನಮಗೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವ ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ, ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಕೈಲಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಸುಸ್ಥಿರ ಸಮಾಜ ನಿರ್ಮಾಣಕ್ಕೆ ತೊಡಗಿದ್ದೇವೆ’ ಎಂದು ತಿಳಿಸಿದರು.

ಪೊಲೀಸ್‌ ಸಿಬ್ಬಂದಿ ಸ್ವಯಂಸೇವಕರಂತೆ ರಸ್ತೆ ಬದಿಯ ಗುಂಡಿಗಳಿಗೆ ಜಲ್ಲಿಕಲ್ಲು ಸುರಿದು, ಕಲ್ಲಿನ ಪುಡಿ ಹಾಕಿದರು. ಟ್ಯಾಂಕರ್‌ ಮೂಲಕ ನೀರು ಸುರಿದು, ಜೆಸಿಬಿ ಬಳಸಿ  ಗುಂಡಿಗಳನ್ನು ಮುಚ್ಚಲಾಯಿತು. ಪೊಲೀಸರ ಈ ಕಾರ್ಯಕ್ಕೆ ವಾಹನ ಚಾಲಕರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

*
ಪೊಲೀಸರು ಕೇವಲ ಹೊಡಿ, ಬಡಿಗೆ ಸೀಮಿತರಾಗಿಲ್ಲ. ಜನಸ್ನೇಹಿಯಾಗಿ ಜನರ ನಡುವೆ ಸಮಸ್ಯೆಗಳ ನಿವಾರಣೆ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
-ಎಚ್‌.ಎಲ್‌.ನಂದೀಶ್‌,
ಸರ್ಕಲ್‌ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT