ADVERTISEMENT

ರಾಮನಗರ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ರಾಗಿ ನಾಶ

ಎಸ್‌.ಸಂಪತ್‌
Published 26 ನವೆಂಬರ್ 2015, 10:22 IST
Last Updated 26 ನವೆಂಬರ್ 2015, 10:22 IST

ರಾಮನಗರ:  ಮಳೆ ಅಭಾವ ಮತ್ತು ತೀವ್ರ ಬರಗಾಲದಿಂದ ಸತತ ಮೂರು ವರ್ಷದಿಂದ ಬೆಳೆ ನಷ್ಟ ಎದುರಿಸಿದ್ದ ರಾಮನಗರ ಜಿಲ್ಲೆಯ ರೈತರು ಈ ವರ್ಷ ಅತಿವೃಷ್ಟಿಯಿಂದಾಗಿ ಪುನಃ ಬೆಳೆ ನಷ್ಟ ಎದುರಿಸಬೇಕಾದ ದುಸ್ಥಿತಿ ಬಂದೆರಗಿದೆ! ಜಿಲ್ಲೆಯಾದ್ಯಂತ ರಾಗಿ ಬೆಳೆ ನೆಲಕಚ್ಚಿದ್ದು, ರೈತರು ದಿಕ್ಕು ತೋಚದಂತಾಗಿದ್ದಾರೆ.

ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ಮಳೆಯು ಸಾಧಾರಣವಾಗಿ ಸುರಿದಿದೆ. ಇದರಿಂದ ಸಂತಸಗೊಂಡ ಜಿಲ್ಲೆಯ ರೈತರು ರಾಗಿ ಬಿತ್ತನೆಗೆ ಆಸಕ್ತಿ ತೋರಿ, ರಾಗಿ ನಾಟಿ ಮಾಡಿದ್ದರು. ಪೈರು ಸಹ ಉತ್ತಮವಾಗಿಯೇ ಬೆಳೆದಿತ್ತು. ಇದರಿಂದ ಈ ಬಾರಿ ಬಂಪರ್‌ ಬೆಳೆ ಬರುವುದು ಖಚಿತ ಎಂಬ ಆಸೆ ರೈತರಲ್ಲಿ ಚಿಗುರಿತ್ತು.

ಆದರೆ ಈ ಆಸೆಯ ಚಿಗುರನ್ನು ಈ ವರ್ಷದ ನವೆಂಬರ್‌ ತಿಂಗಳಲ್ಲಿ ಸುರಿದ ಮಳೆ ಚಿವುಟಿ ಹಾಕಿದೆ. ರಾಗಿಯನ್ನು ಕೊಚ್ಚಿಕೊಂಡು ಹೋಗಿದೆ. ಹಿಂದೆಂದು ಸುರಿಯದಷ್ಟು ಪ್ರಮಾಣದಲ್ಲಿ ಈ ವರ್ಷ ಜಿಲ್ಲೆಯಲ್ಲಿ ಹಿಂಗಾರು ಮಳೆ ಬಂದಿದೆ. ಅಲ್ಲದೆ ಶೀತಗಾಳಿ, ಮೋಡ ಮುಚ್ಚಿದ ವಾತಾವರಣ, ಸೋನೆಯಂತೆ ಸುರಿಯುವ ಮಳೆಯಿಂದಾಗಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ರಾಗಿ ಬೆಳೆ ಬಹುತೇಕ ನಷ್ಟವಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ‘ಜಿಲ್ಲೆಯ ಪ್ರಧಾನ ಕೃಷಿ ಬೆಳೆ ರಾಗಿ ಆಗಿದೆ. ರಾಗಿಯನ್ನೇ ನಂಬಿ ಬಹುತೇಕ ಕುಟುಂಬ ಕೃಷಿ ಚಟುವಟಿಕೆ ನಡೆಸುತ್ತಿವೆ. ಮೂರು ವರ್ಷ ಸತತ ಬರಗಾಲದಿಂದ ರಾಗಿ ಸರಿಯಾಗಿ ಬಂದಿರಲಿಲ್ಲ. ಈ ವರ್ಷ ಕೈಗೆ ಬಂದಿದ್ದ ತುತ್ತು ಬಾಯಿಗೆ ಬರುವ ಮೊದಲೇ ಮಣ್ಣು ಪಾಲಾಗಿದೆ’ ಎಂದು ರಾಮನಗರದ ಪಾಲಬೋವಿದೊಡ್ಡಿಯ ರೈತ ಕುಮಾರ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೆಂಪೇಗೌಡನದೊಡ್ಡಿ, ಪಾಲಬೋವಿದೊಡ್ಡಿ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ರಾಗಿ ಬೆಳೆ ಶೇ 70ರಷ್ಟು ನಷ್ಟವಾಗಿದೆ. ಕೆಲ ರೈತರು ರಾಗಿಯನ್ನು ಕಟಾವು ಮಾಡಿದ್ದಾರೆ. ಆದರೆ ಅದನ್ನು ಒಣಗಿಸಲು ಆಗದೆ ಕೈಚೆಲ್ಲಿದ್ದಾರೆ. ಇನ್ನೂ ಕೆಲವೆಡೆ ರಾಗಿ ತೆನೆ ನೆನೆದು ಮಲಗಿ, ನೆಲಕ್ಕೆ ಬಿದ್ದಿವೆ. ಈಗ ಈ ರಾಗಿ ಬಳಸಲು ಯೋಗ್ಯವಾಗಿ ಉಳಿದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಒಂದು ಎಕರೆಯಲ್ಲಿ ರಾಗಿ ಬೆಳೆಯಲು ಸುಮಾರು 18 ಸಾವಿರದಿಂದ 20 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ನವೆಂಬರ್‌ನಲ್ಲಿ ಬಂದ ಮಳೆರಾಯ ಇಡೀ ರಾಗಿ ಬೆಳೆಯನ್ನು ನಾಶ ಮಾಡಿದ್ದಾನೆ. ಖರ್ಚು ಮಾಡಿದ್ದ ಹಣ, ನಮ್ಮ ಶ್ರಮ ಮಣ್ಣುಪಾಲಾಗಿದೆ. ಮಳೆಯಿಂದ ರಾಗಿ ಕೊಳೆಯುತ್ತಿದ್ದು, ಅದನ್ನು ಕಟಾವು ಮಾಡಿ, ತೆರವುಗೊಳಿಸಲು ಕನಿಷ್ಠ ₹ 6 ಸಾವಿರ ಬೇಕಾಗುತ್ತದೆ. ಕುಟುಂಬಕ್ಕೂ ರಾಗಿ ದೊರೆಯದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ವರ್ಷವೂ ಬರಗಾಲ ಮುಂದುವರೆದಿದ್ದರೆ ನಾವು ಹೊಲದಲ್ಲಿ ಬಿತ್ತನೆಯನ್ನೇ ಮಾಡುತ್ತಿರಲಿಲ್ಲ. ಎಕರೆಯಲ್ಲಿ ರಾಗಿ ಬೆಳೆಯಲು ಮಾಡಿದ ಖರ್ಚಿನಲ್ಲಿ ನಮ್ಮ ಕುಟುಂಬಕ್ಕೆ ವರ್ಷಕ್ಕಾಗುವಷ್ಟು ರಾಗಿ ಖರೀದಿಸಬಹುದಿತ್ತು. ಆದರೆ ಈಗ ಏನೂ ಇಲ್ಲದಂತಾಗಿದೆ. ಬೆಳೆಯ ಜತೆಗೆ ರೈತರನ್ನು ನಾಶ ಮಾಡುವ ಉದ್ದೇಶದಿಂದ ಮಳೆ ಈ ರೀತಿ ಆಟವಾಡುತ್ತಿದೆ ಎಂದು ಅವರು ಶಪಿಸಿದರು.

‘ಅಕಾಲಿಕ ಮಳೆಯಾಗುತ್ತಿರುವುದರಿಂದ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ರಾಗಿಯನ್ನು ಬೆಳೆದ ರೈತರು ಮಳೆಯಿಂದಾಗಿ ಕಟಾವು ಮಾಡಲಾಗುತ್ತಿಲ್ಲ, ಕಟಾವು ಮಾಡಿದವರು ಒಕ್ಕಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಜತೆಗೆ ಇಂತಹ ರಾಗಿ ಹುಲ್ಲನ್ನು ರಾಸುಗಳೂ ಮೇಯುವುದಿಲ್ಲ’ ಎಂದು ರೈತರೂ ಆಗಿರುವ ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಶಿವಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿಯೂ ನವೆಂಬರ್‌ ತಿಂಗಳಲ್ಲಿ ಸುರಿದ ಮಳೆಯಿಂದ ರಾಗಿ ಬೆಳೆ ಅಪಾರ ನಷ್ಟವಾಗಿದೆ.

‘ಚನ್ನಪಟ್ಟಣ ತಾಲ್ಲೂಕಿನಲ್ಲಿ ರಾಗಿ ಬೆಳೆಯು ಶೇ 80ರಷ್ಟು ನಷ್ಟವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು. ಸೂಕ್ತ ಪರಿಹಾರವನ್ನು ಒದಗಿಸಬೇಕು’ ಎಂದು ರೈತ ಮುಖಂಡ ಲಕ್ಷ್ಮಣ ಸ್ವಾಮಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್‌ ನಷ್ಟ: ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ರಾಗಿ ಬೆಳೆ ನಷ್ಟ ಕುರಿತು ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾ ಕೃಷಿ ಇಲಾಖೆಗೆ ಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್‌ ರಾಗಿ ಬೆಳೆ ನಷ್ಟವಾಗಿದೆ ಎಂದು ಗೊತ್ತಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟಾರೆ 77,503 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿತ್ತು.

ರಾಮನಗರ ತಾಲ್ಲೂಕಿನಲ್ಲಿ 18,503 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದ್ದು, ಅಕಾಲಿಕ ಮಳೆಯಿಂದಾಗಿ ಇಲ್ಲಿಯವರೆಗೆ 2,550 ಹೆಕ್ಟೇರ್‌ ನಾಶವಾಗಿರುವುದರ ಮಾಹಿತಿ ಲಭ್ಯವಾಗಿದೆ ಎಂದು ರಾಮನಗರ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಜು ಮಾಹಿತಿ ನೀಡಿದ್ದಾರೆ.

ಮಾಗಡಿ ತಾಲ್ಲೂಕಿನಲ್ಲಿ 22,741 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ. ಆದರೆ ನವೆಂಬರ್‌ನಲ್ಲಿ ಅತಿಯಾಗಿ ಮಳೆ ಸುರಿದಿದ್ದರಿಂದ ಶೇ 30ರಷ್ಟು ಅಂದರೆ 6,822 ಹೆಕ್ಟೇರ್‌ನಷ್ಟು ಬೆಳೆನಾಶವಾಗಿರುವ ಮಾಹಿತಿ ದೊರೆತಿದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಎಂ.ಆರ್‌.ಆನಂದ್‌ ತಿಳಿಸಿದ್ದಾರೆ.

ಕನಕಪುರ ತಾಲ್ಲೂಕನ್ನು ಈ ವರ್ಷ ಸರ್ಕಾರವೇ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ತಾಲ್ಲೂಕಿನಲ್ಲಿ ಈ ವರ್ಷ ರಾಗಿ 27,059 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು.

ಆದರೆ ಸರಿಯಾಗಿ ಮಳೆ ಸುರಿಯದ ಕಾರಣ ಇದರಲ್ಲಿ 9977 ಹೆಕ್ಟೇರ್‌ ರಾಗಿ ಬೆಳೆ ನಾಶವಾಗಿತ್ತು. ಇದೀಗ ಅಕಾಲಿಕ ಮಳೆಯಿಂದಾಗಿ ಮತ್ತಷ್ಟು ರಾಗಿ ನಷ್ಟವಾಗಿ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಕನಕಪುರ ತಾಲ್ಲೂಕಿನಲ್ಲಿ ಅಕಾಲಿಕ ಮಳೆಗೆ 4128 ಹೆಕ್ಟೇರ್‌ ರಾಗಿ ಬೆಳೆ ನಷ್ಟವಾಗಿದೆ ಎಂದು ಕನಕಪುರ ತಾಲ್ಲೂಕು ಕೃಷಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ ಈ ವರ್ಷ 9,200 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ಅಕಾಲಿಕ ಮಳೆಯಿಂದ 6,053 ಹೆಕ್ಟೇರ್‌ ರಾಗಿ ನಾಶವಾಗಿದೆ ಎಂದು ಚನ್ನಪಟ್ಟಣ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ನಾಗರಾಜು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.