ADVERTISEMENT

ರೈತರಲ್ಲಿ ಆಶಾಭಾವ ಮೂಡಿಸಿದ ತೊಗರಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 9:34 IST
Last Updated 13 ನವೆಂಬರ್ 2017, 9:34 IST
ರಾಮನಗರ ತಾಲ್ಲೂಕಿನ ಪೇಟೆಕುರುಬರಹಳ್ಳಿಯಲ್ಲಿ ಹುಲುಸಾಗಿ ಬೆಳೆದಿರುವ ತೊಗರಿ
ರಾಮನಗರ ತಾಲ್ಲೂಕಿನ ಪೇಟೆಕುರುಬರಹಳ್ಳಿಯಲ್ಲಿ ಹುಲುಸಾಗಿ ಬೆಳೆದಿರುವ ತೊಗರಿ   

ರಾಮನಗರ: ಹಿಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆಯಾಗಿರುವು ದರಿಂದ ಜಿಲ್ಲೆಯಲ್ಲಿ ತೊಗರಿ ಬೆಳೆ ಉತ್ತಮವಾಗಿ ಬೆಳೆದಿದ್ದು, ರೈತರಲ್ಲಿ ಆಶಾಭಾವ ಮೂಡಿದೆ.
ತೊಗರಿ ಐದಾರು ಅಡಿ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ರೈತರು ಅಂತರ ಬೆಳೆಯಾಗಿ, ಹಲವು ರೈತರು ತೊಗರಿಯೊಂದನ್ನೆ ಬಿತ್ತನೆ ಮಾಡಿದ್ದರು.

ಉತ್ತಮವಾಗಿ ಮಳೆಯಾಗಿ ರುವುದರಿಂದ ತೊಗರಿಗೆ ಅನುಕೂ ಲವಾಗಿದೆ. ಹುಲುಸಾಗಿ ಅಷ್ಟೇ ದಟ್ಟವಾಗಿ ಬೆಳೆದು ನಿಂತಿರುವ ತೊಗರಿ ಬೆಳೆ, ಅಕ್ಕಪಕ್ಕದ ಸಾಲುಗಳು ಒಂದಕ್ಕೊಂದು ಕಲೆತಿವೆ. ಹಿಂದಿನ ವರ್ಷ ಬೇಳೆಕಾಳುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಬಹಳಷ್ಟು ರೈತರು ತೊಗರಿಯನ್ನೇ ಪ್ರಮುಖ ವಾಗಿರಿಸಿಕೊಂಡು ಇಡಿ ಬೆಳೆಯಾಗಿ ಬೆಳೆದಿದ್ದರು. ನಂತರ ಮಳೆ ಬಾರದೆ ತೊಗರೆ ಬೆಳೆ ಹಾಳಾಗಿತ್ತು. ಈ ವರ್ಷದ ಸ್ಥಿತಿ ಭಿನ್ನವಾಗಿದ್ದು, ಉಳಿದ ಬೆಳೆಗಳಿಗಿಂತ ತೊಗರಿ ಉತ್ತಮವಾಗಿದೆ.

ಜಿಲ್ಲೆಯ ಬಹುತೇಕ ಜಮೀನುಗಳಲ್ಲಿ ತೊಗರಿ ಬೆಳೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಸದ್ಯ, ಮೊಗ್ಗು ಹೂವು ಹಂತದಲ್ಲಿದ್ದು , ಮಳೆ ಬಿಡುವು ಪಡೆದಿದೆ. ಹಗಲಿನಲ್ಲಿ ಪ್ರಖರ ಬಿಸಿಲು ರಾತ್ರಿವೇಳೆ ಚಳಿ ಆವರಿಸುತ್ತಿದ್ದು ಬೆಳೆಗೆ ಪೂರಕವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಉತ್ತಮ ಮಳೆಯಿಂದಾಗಿ ತೊಗರಿ ಬೆಳೆಗೆ ಜೀವಕಳೆ ಬಂದಿದೆ. ಬೆಳೆ ಹುಲುಸಾಗಿ ನಳನಳಿಸುತ್ತಿದ್ದು. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ರೈತರು ಈ ವರ್ಷ 3,500 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ, ಎಲ್ಲಾ ಕಡೆಯಲ್ಲಿಯೂ ತೊಗರಿ ಉತ್ತಮ ವಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಸ್.ಎಂ. ದೀಪಜಾ ತಿಳಿಸಿದರು.

‘ಹೂವಾಡುವ–ಕಾಯಿ ಕಟ್ಟುವ ಈ ಹಂತದಲ್ಲಿ ತೊಗರಿ ಬೆಳೆಗೆ ಮಳೆ ಸರಿಯಾದ ಸಮಯಕ್ಕೆ ಸುರಿಯಿತು. ಈ ಅವಧಿಯಲ್ಲಿ ಉತ್ತಮ ಮಳೆಯಾಗಿರುವುದು ನಮ್ಮ ಪುಣ್ಯ. ಈ ಮಳೆ ಮತ್ತು ತೇವಾಂಶವು ರಾಶಿಯ ಅವಧಿಯವರೆಗೂ ತೊಗರಿಯ ಕೈ ಹಿಡಿಯಲಿದೆ’ ಎನ್ನುತ್ತಾರೆ ಪೇಟೆ ಕುರುಬರಹಳ್ಳಿಯ ರೈತ ತ್ಯಾಗರಾಜ್‌.

‘ಸದ್ಯ ಯಾವುದೇ ರೋಗ, ಕೀಟ ಹಾವಳಿ ಕಂಡುಬಂದಿಲ್ಲ. ಇದೇ ರೀತಿ ಮುಂದುವರಿದರೆ ಈ ಬಾರಿ ತೊಗರಿ ಉತ್ತಮ ಇಳುವರಿ ಬರುವ ಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತೊಗರಿ ಬೆಳೆಯು ಉತ್ತಮವಾಗಿ ಕಾಯಿ ಕಟ್ಟುತ್ತಿದ್ದು, ಉತ್ತಮ ಇಳುವರಿ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ದ್ದಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.