ADVERTISEMENT

‘ವಿವೇಚನೆಯಿಂದ ಮತ ಚಲಾಯಿಸಿ’

ಮಾಗಡಿಯಲ್ಲಿ ಮತದಾನ ಜಾಗೃತಿ ಅಂಗವಾಗಿ ಶಿಕ್ಷಕರಿಂದ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 10:03 IST
Last Updated 20 ಏಪ್ರಿಲ್ 2018, 10:03 IST

ಮಾಗಡಿ: ಆಮಿಷಕ್ಕೆ ಮರುಳಾಗದೆ, ಪ್ರಾಮಾಣಿಕವಾಗಿ ವಿವೇಚನೆಯಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ ತಿಳಿಸಿದರು.

ಮತದಾನ ಮಹತ್ವದ ಜಾಗೃತಿ ಅಭಿಯಾನದ ಅಂಗವಾಗಿ ಗುರುವಾರ ಶಿಕ್ಷಕರು ನಡೆಸಿದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಣಕ್ಕಾಗಿ ಮತ ಮಾರಾಟ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಕಟ ತರುತ್ತದೆ. ಹಕ್ಕು ಚಲಾಯಿಸಲು ಮತದಾನವೇ ಸೂಕ್ತ ಎಂಬುದನ್ನು ಗ್ರಾಮೀಣ ಮುಗ್ಧ ಮತದಾರರಲ್ಲಿ ಶಿಕ್ಷಕರು ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

ವಯಸ್ಕರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸಂವಿಧಾನದ ಆಶಯ ರಕ್ಷಿಸುವಂತಹ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಮುರುಡಯ್ಯ ಮಾತನಾಡಿ, ಮತದಾನ ದೇಶಾಭಿಮಾನದ ಸಂಕೇತ. ಸಂವಿಧಾನದ ಪ್ರತಿಯೊಬ್ಬ ವಯಸ್ಕರಿಗೂ ನೀಡಿರುವ ಅಮೂಲ್ಯ ಹಕ್ಕು. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಸಾರ್ವತ್ರಿಕ ಚುನಾವಣೆ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಮಹತ್ವದ ಅಂಶವಾಗಿದೆ ಎಂದರು.

ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಚುನಾವಣೆ ನಡೆಸುವಲ್ಲಿ ನಿಷ್ಪಕ್ಷಪಾತವಾಗಿ ಕಾನೂನು ಬದ್ಧವಾಗಿ ಚುನಾವಣೆ ನಡೆಸುತ್ತದೆ. ಚುನಾಯಿತ ಪ್ರತಿನಿಧಿಗಳು ಪ್ರಜಾಪ್ರಭುತ್ವದ ರಕ್ಷಕರಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಮತದಾರರಿಗೆ ಸೇರಿದೆ ಎಂದು ಹೇಳಿದರು.

ಶಿಕ್ಷಕರು ಪ್ರತಿಯೊಂದು ಗ್ರಾಮದಲ್ಲಿಯೂ ಸಂಚರಿಸಿ ರೈತರು, ಕೂಲಿ ಕಾರ್ಮಿಕರು, ಅಂಗವಿಕಲರು, ಮಹಿಳೆಯರು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು, ಬುಡಕಟ್ಟು ಸಮುದಾಯದವರನ್ನು ಭೇಟಿ ಮಾಡಿ ಕಡ್ಡಾಯವಾಗಿ ಚುನಾವಣೆಯಲ್ಲಿ ಮತಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಬಿಇಒ ಸಿದ್ದೇಶ್ವರ.ಎಸ್ ಮಾತನಾಡಿ, ಮತದಾರರು ಮತದಾನ ಮಾಡಿದ ಮೇಲೆ ಮತ ಖಾತರಿ ಯಂತ್ರದಲ್ಲಿ ತಾವು ಚಲಾಯಿಸಿರುವ ಮತ ಖಚಿತಪಡಿಸಿಕೊಳ್ಳಬಹುದು. ಮದ್ಯಪಾನ ಮಾಡಿ ಮತದಾನ ಮಾಡಬೇಡಿ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ, ತಹಶೀಲ್ದಾರ್ ಎನ್.ಶಿವಕುಮಾರ್, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ, ನರೇಗಾ ಅಧಿಕಾರಿ ನವೀನ್ ಕುಮಾರ್, ಆರ್.ಒ.ಕೃಷ್ಣಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಶಿವಪ್ಪ, ರಾಜ್ಯ ಶಿಕ್ಷಕರ ಸಂಘದ ಪ್ರತಿನಿಧಿ ಎಂ.ಕೆಂಪೇಗೌಡ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ಲೋಕೇಶ್ ಮತದಾನ ಮಹತ್ವದ ಜಾಗೃತಿ ಅಭಿಯಾನ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.