ADVERTISEMENT

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 11:01 IST
Last Updated 16 ನವೆಂಬರ್ 2017, 11:01 IST
ಮಾಗಡಿ ತಾಲ್ಲೂಕು ಜೆ.ಡಿ.ಎಸ್.ಅಧ್ಯಕ್ಷ ದೊಡ್ಡಸೋಮನಹಳ್ಳಿ ರಾಮಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾಗಡಿ ತಾಲ್ಲೂಕು ಜೆ.ಡಿ.ಎಸ್.ಅಧ್ಯಕ್ಷ ದೊಡ್ಡಸೋಮನಹಳ್ಳಿ ರಾಮಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಮಾಗಡಿ: ಜೆ.ಡಿ.ಎಸ್ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರುವ ಶಾಸಕ ಎಚ್‌.ಸಿ,ಬಾಲಕೃಷ್ಣ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಅಶೋಕ್‌ ಮೊದಲು ರಾಜೀನಾಮೆ ನೀಡಬೇಕು ಎಂದು ತಾಲ್ಲೂಕು ಜೆ.ಡಿಎಸ್‌ ಅಧ್ಯಕ್ಷ ದೊಡ್ಡ ಸೋಮನಹಳ್ಳಿ ರಾಮಣ್ಣ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ; ಇಲ್ಲ ಪರಿಣಾಮ ಎದುರಿಸಿ’ ಎಂದರು.

ಬಾಲಕೃಷ್ಣ ಅವರು, ಎಚ್‌.ಡಿ,ದೇವೇಗೌಡ ಮತ್ತು ಎಚ್‌.ಡಿ.ಕುಮಾರ ಸ್ವಾಮಿ ಅವರ ನೆರಳಿನಲ್ಲೇ ಬೆಳೆದು ನಾಲ್ಕು ಬಾರಿ ಶಾಸಕರಾಗಿದ್ದಾರೆ. ತಾಲ್ಲೂಕಿನ ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ. ದೊಡ್ಡಗೌಡರ ಬಗ್ಗೆ ಟೀಕೆ ಮಾಡುವ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.

ADVERTISEMENT

‘ಜೆಡಿಎಸ್‌ ಪಕ್ಷದ ಬೆಳವಣಿಗೆಗೆ ಅಹರ್ನಿಶಿ ದುಡಿದಿದ್ದ ಅ.ದೇವೇಗೌಡ ಇನ್ನೂ ಬಿಜೆಪಿ ಸೇರಿಲ್ಲ, ನಾವೆಲ್ಲರೂ ಜೆಡಿಎಸ್‌ ವರಿಷ್ಠರಲ್ಲಿ ಮನವಿ ಮಾಡಿ ಅ.ದೇವೇಗೌಡರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಯತ್ನಿಸುತ್ತೇವೆ’ ಎಂದರು.

‘ಅಪ್ಪ ಮಕ್ಕಳು ಹಣದ ಥೈಲಿ ನೋಡುತ್ತಿದ್ದಾರೆ ಎಂದಿರುವ ಎಚ್‌.ಎನ್‌.ಅಶೋಕ್‌ ಹಿಂತಿರುಗಿ ನೋಡಿಕೊಳ್ಳಲಿ. ನನ್ನಲ್ಲಿ ಹಣವಿಲ್ಲದ ಕಾರಣ ಎರಡು ಬಾರಿ ಶಾಸಕರು ನನಗೆ ಜಿಲ್ಲಾ ಪಂಚಾಯಿತಿ ಸ್ಥಾನ ತಪ್ಪಿಸಿದರು’ ಎಂದು ಪೊಲೀಸು ರಾಮಣ್ಣ ತಿಳಿಸಿದರು.

ಹಾಲು ಒಕ್ಕೂಟದ ನಿರ್ದೇಶಕ ನರಸಿಂಹ ಮೂರ್ತಿ, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರನ್ನಾಗಿಸುವಂತೆ ಎಚ್‌.ಡಿ.ಕುಮಾರಸ್ವಾಮಿ ಅವರ ಕಾಲು ಹಿಡಿದು ಬೇಡಿಕೊಂಡಿದ್ದರು. ಅಧ್ಯಕ್ಷ ಗದ್ದುಗೆ ಸಿಗಲಿಲ್ಲ ಎಂದು ಜೆಡಿಎಸ್‌ ಅಪ್ಪ ಮಕ್ಕಳ ಪಕ್ಷ ಎಂದು ಟೀಕೆ ಮಾಡುವುದು ಸರಿಯಲ್ಲ ಎಂದರು.

ಶಾಸಕರ ಕುಟುಂಬದವರೇ ತಾಲ್ಲೂಕಿನ ಬಹುತೇಕ ಅಧಿಕಾರವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.

ಬಿಡಿಸಿಸಿ ಬ್ಯಾಂಕಿನ ಕಚೇರಿಯನ್ನು ಪಕ್ಷದ ರಾಜಕೀಯ ಪತ್ರಿಕಾಗೋಷ್ಠಿ ಮಾಡಲು ಬಳಸುತ್ತಿರುವುದು ಮೊದಲು ತಪ್ಪಿಸಿ ಎಂದು ಜೆಡಿಎಸ್ ಮುಖಂಡ ವಾಟರ್ ಬೋರ್ಡ್‌ ರಾಮಣ್ಣ ತರಾಟೆಗೆ ತೆಗೆದುಕೊಂಡರು. ಜೆ.ಡಿ.ಎಸ್‌.ಮುಖಂಡ ಬಿ.ಆರ್‌.ಗುಡ್ಡೇಗೌಡ ಮಾತನಾಡಿ ಶಾಸಕರ ನಿಲುವನ್ನು ಟೀಕಿಸಿದರು.

ಜೆಡಿಎಸ್ ಮುಖಂಡ ಪಿ.ವಿ.ಸೀತಾರಾಮು, ಗುದ್ದಲಹಳ್ಳಿ ನಿವೃತ್ತ ಪೊಲೀಸ್ ಅಧಿಕಾರಿ ರಾಮಣ್ಣ, ಸಂಜೀವಯ್ಯನಪಾಳ್ಯದ ಮೀಸೆರಾಮಣ್ಣ, ಹೊಸಹಳ್ಳಿರಂಗಣ್ಣ, ದಂಡಿಗೆಪುರದ ಅಶೋಕ್, ಹೊಸಪೇಟೆ ವಿಶ್ವ, ಜವರೇಗೌಡ, ಕೋಟಪ್ಪ, ಹೊಸಪೇಟೆ ನಾಗರಾಜು, ಹೊಂಬಾಳಮ್ಮನಪೇಟೆ ರೇವಣ್ಣ, ನಯಾಜ್, ಹೊಸಪಾಳ್ಯದ ಶಿವರಾಮಯ್ಯ, ರಾಮಣ್ಣ, ಕಲ್ಕೆರೆ ಉಮೇಶ್, ಕುದೂರಿನ ಪುರುಷೋತ್ತಮ್, ರಹಮತ್‌ ಉಲ್ಲಾ ಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.