ADVERTISEMENT

ಶೀಘ್ರ ಕ್ಷೇತ್ರ ಪ್ರವಾಸ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 9:05 IST
Last Updated 24 ಅಕ್ಟೋಬರ್ 2014, 9:05 IST

ರಾಮನಗರ: ‘ಕ್ಷೇತ್ರದಾದ್ಯಂತ ಪ್ರವಾಸ ಕೈಗೊಳ್ಳಲು ಇತ್ತೀಚೆಗೆ ಸ್ಥಳೀಯ ಮುಖಂಡರ ಜತೆ ಕೇತಿಗಾನಹಳ್ಳಿಯಲ್ಲಿ ಸಭೆ ನಡೆಸಿ ಚರ್ಚಿಸಿದ್ದೇನೆ. ದೀಪಾವಳಿ ಹಬ್ಬದ ನಂತರ 15ರಿಂದ 20 ದಿನಗಳ ಕಾಲ ನಿರಂತರವಾಗಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲಾಗುವುದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.


ನಗರದ ಅರ್ಚಕರಹಳ್ಳಿ ಸಮೀಪ ಬುಧವಾರ ‘ಉಮೇಶ್ ಆಟೊ ಗ್ಯಾಸ್ ಫಿಲ್ಲಿಂಗ್ ಕೇಂದ್ರ’ ಉದ್ಘಾಟನಾ ಸಮಾ­ರಂಭದ ನಂತರ ಅವರು ಸುದ್ದಿಗಾರರ ಜತೆ ಅವರು ಮಾತನಾಡಿದರು.

ಬಿಡದಿ ಕ್ಷೇತ್ರದಲ್ಲೂ ಪ್ರವಾಸ ಕೈಗೊಳ್ಳುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಇಲ್ಲೂ ಸಹ ಶಾಸಕ ಬಾಲಕೃಷ್ಣ ಜತೆ ಪ್ರವಾಸ ಕೈಗೊಳ್ಳುತ್ತೇನೆ. ಅತಿ ಶೀಘ್ರದಲ್ಲಿ ಜಿಲ್ಲೆಯಲ್ಲಿ ಪಕ್ಷದ ಪದಾಧಿಕಾರಿಗಳನ್ನು ಪುನರ್ ರಚಿಸಿ ಬಲವರ್ಧನೆ ಮಾಡುವುದಾಗಿ ಅವರು ತಿಳಿಸಿದರು.

ಶಾಸಕ ಜಮೀರ್ ಅಹಮದ್ ಖಾನ್‌ ಅಲ್ಪಸಂಖ್ಯಾತರ ಸಭೆ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ‘ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಮೀರ್ ಅವರು ಸಭೆ ನಡೆಸುತ್ತಿದ್ದರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಬಂದು ದಶಕಗಳೆ ಕಳೆದರೂ ಎಷ್ಟೇ ಕಾರ್ಯಕ್ರಮಗಳನ್ನು ಹಾಕಿಕೊಂಡರು ಅಲ್ಪಸಂಖ್ಯಾತರ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ. ಜಮೀರ್ ಈ ಕುರಿತು ಚಿಂತಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT