ADVERTISEMENT

ಸಂಪರ್ಕ ರಸ್ತೆ ಮುಚ್ಚಿದ್ದರಿಂದ ಸಮಸ್ಯೆ– ಗ್ರಾಮಸ್ಥರ ದೂರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 10:06 IST
Last Updated 4 ಸೆಪ್ಟೆಂಬರ್ 2017, 10:06 IST

ಚನ್ನಪಟ್ಟಣ: ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೆಲವು ವ್ಯಕ್ತಿಗಳು ತಮಗೆ ಸೇರಬೇಕೆಂದು ಮುಚ್ಚಿದ್ದು, ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ ಎಂದು ಗ್ರಾಮದ ಚಂದ್ರಶೇಖರ್ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಿದ್ದನಹಳ್ಳಿ ಗ್ರಾಮದಿಂದ ಚನ್ನಪಟ್ಟಣ- ಮಲ್ಲನಕುಪ್ಪೆ ಮುಖ್ಯರಸ್ತೆಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯನ್ನು ಬಹಳ ಹಿಂದಿನಿಂದಲೂ ಗ್ರಾಮಸ್ಥರು ಓಡಾಡಲು ಬಳಸುತ್ತಿದ್ದಾರೆ. ಇತ್ತೀಚೆಗೆ ಕೆಲವರು ತಮಗೆ ಸೇರಿದ ಜಾಗದಲ್ಲಿ ಈ ರಸ್ತೆ ಇದೆ ಎಂದು ರಸ್ತೆಗೆ ಅಡ್ಡಲಾಗಿ ಸುಮಾರು ಐದು ಅಡಿಗಳಷ್ಟು ಮಣ್ಣು ಹಾಕಿ ಮುಚ್ಚಿದ್ದಾರೆ ಎಂದು ದೂರಿದ್ದಾರೆ.

ರಸ್ತೆಯನ್ನು ಮುಚ್ಚಿದ್ದರಿಂದ ಮಳೆ ಬಿದ್ದಾಗ ನೀರು ಪಕ್ಕದ ಗುಡಿಸಲುಗಳು, ಮನೆಗಳಿಗೆ ನುಗ್ಗುತ್ತಿದೆ. ಜನರು ಓಡಾಡಲು ಸಮಸ್ಯೆಯಾಗಿದೆ. ಹಿಂದಿನಿಂದಲೂ ಓಡಾಡುತ್ತಿದ್ದ ರಸ್ತೆಯನ್ನು ಮುಚ್ಚಿರುವುದು ಗ್ರಾಮದ ಒಳಗೆ ಓಡಾಡಲು ಸಂಪರ್ಕವನ್ನೇ ಕಡಿದು ಹಾಕಿದೆ ಎಂದಿದ್ದಾರೆ.

ADVERTISEMENT

‘ಈ ರಸ್ತೆ ಇರುವ ಜಾಗದಲ್ಲಿ 6 ಗುಂಟೆ ಜಾಗ ನಮಗೆ ಸೇರಬೇಕು ಎಂದು ಕೆಲವು ಖಾಸಗಿ ವ್ಯಕ್ತಿಗಳು ಹೇಳುತ್ತಿದ್ದಾರೆ. ರಸ್ತೆಯು 9 ಅಡಿಯಷ್ಟು ಅಗಲವಿದೆ. ಅವರಿಗೆ 6 ಅಡಿ ಬಿಟ್ಟುಕೊಟ್ಟರೂ ಇನ್ನೂ ಮೂರು ಅಡಿ ರಸ್ತೆ ಉಳಿಯುತ್ತದೆ. ಅದನ್ನು ತೆರವು ಮಾಡಿಕೊಡಿ ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ಸರ್ವೆ ಮಾಡಿಸಬೇಕು. ರಸ್ತೆಗೆ ಅಡ್ಡಲಾಗಿ ಹಾಕಿರುವ ಮಣ್ಣು ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.