ADVERTISEMENT

‘ಸಂವಿಧಾನದ ಆಶಯ ಕಾಪಾಡಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 5:53 IST
Last Updated 5 ಡಿಸೆಂಬರ್ 2017, 5:53 IST

ಮಾಗಡಿ: ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ರಚಿಸದಿದ್ದರೆ ದೇಶದ ಶೋಷಿತರು ಗುಲಾಮರಾಗಿ ಬೇಕಿತ್ತು ಎಂದು ಡಿ.ದೇವರಾಜ ಅರಸು ಸಾಂಸ್ಕೃತಿಕ ವಿಚಾರ ವೇದಿಕೆಯ ಗೌರವಾಧ್ಯಕ್ಷ ಎ.ಎಚ್‌.ಬಸವರಾಜು ತಿಳಿಸಿದರು.

ಮಾಗಡಿಯಿಂದ ಮುಂಬೈನ ದಾದರ್‌ಗೆ ತೆರಳಿದ ವಿಶ್ವಶಾಂತಿಗಾಗಿ ಸಂವಿಧಾನ ರಚಿಸಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಜ್ಯೋತಿಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂವಿಧಾನದತ್ತ ಮೀಸಲಾತಿ ಸವಲತ್ತುಗಳನ್ನು ಸರಿಯಾಗಿ ಜಾರಿಗೆ ತರಬೇಕು.ಕಾಯ್ದೆ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ದ ಶೋಷಿತರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.

ADVERTISEMENT

ಮಾಗಡಿಯಲ್ಲಿ ಅಂಬೇಡ್ಕರ್‌ ಪುತ್ಥಳಿ ಸ್ಥಾಪಿಸಲು ಪ್ರತಿನಿಧಿಗಳು ಮುಂದಾಗದಿರುವುದು ಶೋಚನೀಯವಾಗಿದೆ. ಮುಂದಿನ ವರ್ಷದ ಒಳಗೆ ಪುತ್ಥಳಿ ಸ್ಥಾಪಿಸುವಂತೆ ಸಂಘಟಿತ ಹೋರಾಟ ಅನಿವಾರ್ಯ ಎಂದರು.

ಅಂಬೇಡ್ಕರ್‌ ಮತ್ತು ಸಂವಿಧಾನದ ವಿಷಯ ಬಂದಾಗ ಪರಿಶಿಷ್ಟ ಜಾತಿ, ವರ್ಗಗಳು, ಹಿಂದುಳಿದ ಅಲ್ಪಸಂಖ್ಯಾತರು ಸಂಘಟಿತರಾಗಬೇಕು. ಶೋಷಿತರೆಲ್ಲರೂ ಒಂದೇಧ್ವನಿಯಲ್ಲಿ ಕೂಗುಹಾಕಬೇಕು ಎಂದು ತಿಳಿಸಿದರು.

ಜ್ಯೋತಿ ಯಾತ್ರೆಯ ವ್ಯವಸ್ಥಾಪಕ ಕಲ್ಕೆರೆ ಶಿವಣ್ಣ ಮಾತನಾಡಿ, ಸಂವಿಧಾನ ಬದಲಾಯಿಸಬೇಕು ಎನ್ನುವ ಪೇಜಾವರ ಮಠಾಧೀಶರ ಹೇಳಿಕೆ ಖಂಡನೀಯ. ರಾಜಕೀಯ ಹಿತಾಸಕ್ತಿ ಶೋಷಿತರ ಪರ ಇಲ್ಲ, ಚುನಾವಣೆಯಲ್ಲಿ ಶೋಷಿತ ಸಮುದಾಯಗಳ ಯುವಕರು ಬಲಿಯಾಗಬಾರದು. ನಿರಂತರ ಹೋರಾಟದಿಂದ ಮಾತ್ರ ಸಂಘಟಿತರಾಗಬೇಕು ಎಂದರು.

ಅರಸು ವೇದಿಕೆಯ ಅಧ್ಯಕ್ಷ ಪಿ.ವಿ.ಸೀತಾರಾಮು, ಮುಖಂಡರಾದ ಮಾಡಬಾಳ್‌ ಆನಂದ್‌, ಬಾಬೂ ಜಗಜೀವನ್‌ ರಾಮ್‌ ನಗರದ ಶ್ರೀನಿವಾಸ್‌, ದೊಡ್ಡಿ ಲಕ್ಷ್ಮಣ್‌, ಶಶಿಧರ, ಹೊಂಬಾಳಮ್ಮನಪೇಟೆ ರಾಮು, ಸೋಮೇಶ್ವರ ಬಡಾವಣೆಯ ನಾಗರಾಜು, ಬೆಳಗವಾಡಿ ವೆಂಕಟೇಶ್‌, ಗುಡೇಮಾರನಹಳ್ಳಿ ಹುಚ್ಚಣ್ಣ, ರಂಗಧಾಮಯ್ಯ ಮಾತನಾಡಿದರು. ಮುಖಂಡರಾದ ಮಾರ್ಕೆಟ್‌ ನರಸಿಂಹಯ್ಯ, ಕೆಂಚನರಸಯ್ಯ, ಹೊಸಪೇಟೆ ಅಶ್ವಥ್‌, ಹರ್ತಿ ನರಸಿಂಹಯ್ಯ, ಮಾಡಬಾಳ್‌ ಕೆಂಪೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.