ADVERTISEMENT

ಸಾರಾಯಿ ನಿಷೇಧ: ಈಡಿಗರ ಆತ್ಮಹತ್ಯೆ

ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 9:21 IST
Last Updated 30 ಮಾರ್ಚ್ 2015, 9:21 IST

ರಾಮನಗರ:  ‘ಸಾರಾಯಿ ಮಾರಾಟವನ್ನು ನಿಷೇಧಿಸಿದಾಗ ಅದೇ ಕಸಬನ್ನು ಜೀವಾನಾಧಾರ ಮಾಡಿಕೊಂಡಿದ್ದ ಈಡಿಗ ಸಮುದಾಯದ ನೂರಾರು ಜನರು ಆತ್ಮಹತ್ಯೆ ಮಾಡಿಕೊಂಡರು. ಆದರೆ ಹಿಂದುಳಿದ ವರ್ಗದವರಾದ ಕಾರಣ ಯಾವ ಹೋರಾಟಗಳು ನಡೆಯಲೇ ಇಲ್ಲ’ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಆರ್ಯ ಈಡಿಗ ಮಹಾಸಂಸ್ಥಾನ ಹಾಗೂ ರೇಣುಕ ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್‌ ಜಂಟಿಯಾಗಿ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆ, ಡಾ. ರಾಜ್‌ಕುಮಾರ್‌ ಕಲಾಮಂದಿರ ಸೇರಿದಂತೆ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಂದು ವೇಳೆ ದೊಡ್ಡ ಸಮುದಾಯಗಳಲ್ಲಿ ಈ ರೀತಿಯ ಘಟನೆಗಳು ನಡೆದಿದ್ದರೆ ರಕ್ತಕ್ರಾಂತಿಯೇ ಆಗುತ್ತಿತ್ತು. ಇತ್ತೀಚೆಗೆ ದೊಡ್ಡ ಸಮುದಾಯದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ರಾಜ್ಯದಲ್ಲಿ ಏನೆಲ್ಲ ಆಯಿತು ಎಂಬುದು ರಾಜ್ಯದ ಜನಕ್ಕೆ ಈಗಾಗಲೇ ಗೊತ್ತಾಗಿದೆ’ ಎಂದು ಅವರು ಹೇಳಿದರು.

‘ಸಾರಾಯಿ ಮಾರಾಟ ನಿಷೇಧಿಸುವಾಗ ಹಿಂದಿನ ಸರ್ಕಾರಗಳು ಮುಂದಾಲೋಚನೆ ಮಾಡಲಿಲ್ಲ. ಮುಂದಾಲೋಚನೆ ಇಲ್ಲದೆ ತೀರ್ಮಾನಗಳು ತೆಗೆದುಕೊಂಡರೆ ಎಂತಹ ಅನಾಹುತಗಳು ಆಗುತ್ತವೆ ಎಂಬುದಕ್ಕೆ ಈಡಿಗ ಸಮುದಾಯದ ನೂರಾರು ಜನರ ಆತ್ಮಹತ್ಯೆಯೇ ನಿದರ್ಶನ’ ಎಂದು ಅವರು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಆರ್‌.ಎಲ್‌. ಜಾಲಪ್ಪ ಅವರು ಮಾತನಾಡಿ, ‘ರಾಜ್ಯದ ಇತಿಹಾಸದಲ್ಲಿಯೇ ಘಟನೆ ನಡೆದು ಏಳು ದಿನಗಳ ಒಳಗೆ ಸಿಬಿಐ ತನಿಖೆಗೆ ಪ್ರಕರಣವನ್ನು ಒಪ್ಪಿಸಿದವರಲ್ಲಿ ಸಿದ್ದರಾಮಯ್ಯ ಅವರೇ ಮೊದಲಿಗರು ಎಂದು ಅವರು ಹೇಳಿದರು.
ಐಎಎಸ್‌ ಅಧಿಕಾರಿ ಡಿ.ಕೆ.ರವಿ ಸಾವಿನ ಹೋರಾಟದಲ್ಲಿ ಜಾತಿ ಸಂಘಟನೆ ಮತ್ತು ಮಠಾಧೀಶರು ಸಿದ್ದರಾಮಯ್ಯ ವಿರುದ್ಧ ಹೋರಾಟ ನಡೆಸಿದ್ದರ ಬಗ್ಗೆ ಅವರು ಹೆದರುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಬಡತನದಲ್ಲಿ ಬೆಳೆದ ನಾನು ಕಷ್ಟಪಟ್ಟು ವಿದ್ಯಾಸಂಸ್ಥೆ ಆರಂಭಿಸಿದ್ದೇನೆ. ಯಾರ ಅದೃಷ್ಟವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು ನನ್ನ ಮನೆ ಮತ್ತು 55 ಎಕರೆ ಜಮೀನನ್ನು ಹಿಂದುಳಿದ ವರ್ಗಗಳ ಸೇವೆಗಾಗಿ ದೇವರಾಜ ಅರಸು ಟ್ರಸ್ಟ್‌ಗೆ ಅರ್ಪಿಸಿದ್ದೇನೆ. ಸಿದ್ದರಾಮಯ್ಯ ಇನ್ನೂ 8 ವರ್ಷ ಸಿ.ಎಂ ಆಗಿರಲಿ. ನಾವೆಲ್ಲ ಅವರಿಗೆ ಶಕ್ತಿ ತುಂಬೋಣ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.