ADVERTISEMENT

ಹಿಂದುಗಳ ಮೇಲಿನ ಹಿಂಸಾಚಾರಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 7:13 IST
Last Updated 2 ಮಾರ್ಚ್ 2017, 7:13 IST
ರಾಮನಗರದ ಕಂದಾಯ ಭವನದ ಎದುರು ಬುಧವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ರಾಮನಗರದ ಕಂದಾಯ ಭವನದ ಎದುರು ಬುಧವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ರಾಮನಗರ: ಕೇರಳದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಸಹಿತ ಹಿಂದೂಗಳ ಮೇಲೆ ಎಡಪಂಥೀಯ ಸಂಘಟನೆಗಳು ಹಿಂಸಾಚಾರ ನಡೆಸುತ್ತಿದ್ದು, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಹಳೇ ಬಸ್‌ ನಿಲ್ದಾಣ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಎಂ.ಜಿ. ರಸ್ತೆ ಮಾರ್ಗವಾಗಿ ಕಂದಾಯ ಭವನದವರೆಗೆ ಮೆರವಣಿಗೆಯಲ್ಲಿ ಧಾವಿಸಿ ಬಿ.ಎಂ. ರಸ್ತೆಯಲ್ಲಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

‘ಕೇರಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯ ಆರಂಭಿಸಿದಾಗಿನಿಂದ ಸಿಪಿಎಂ ಕಾರ್ಯಕರ್ತರು ಹಿಂದೂಗಳ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಲೇ ಬಂದಿದ್ದಾರೆ. ಅಲ್ಲಿನ ನಾಯಕತ್ವದ ಪರೋಕ್ಷ ಸಮ್ಮತಿಯಿಂದಾಗಿ ಕಳೆದ 7 ದಶಕಗಳಲ್ಲಿ ಹಿಂದೂ ಸಂಘಟನೆಗಳ 250ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಗೀಡಾಗಿದ್ದಾರೆ.

ರಾಜ್ಯದಲ್ಲಿ ಶಾಂತಿಯ ವಾತಾವರಣ ಮೂಡಿಸಲು ಆರ್‍ಎಸ್‍ಎಸ್ ಪ್ರಯತ್ನ ಮಾಡುತ್ತಾ ಬಂದಿದೆ. ಆದರೆ ಸಿಪಿಎಂ ಅರ್ಥಹೀನ ಹಿಂಸಾಚಾರವನ್ನು ನಡೆಸಿಕೊಂಡು ಬಂದಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಅಧಿಕಾರಕ್ಕೆ ಬಂದಾಗಲೆಲ್ಲ ಗೃಹ ಖಾತೆಯನ್ನು ಪಕ್ಷದವರೇ ವಹಿಸಿಕೊಂಡು ಪೊಲೀಸ್ ಇಲಾಖೆಯನ್ನು ತನ್ನ ಕೈಗೊಂಬೆಯಂತೆ ಮಾಡಿಕೊಂಡಿದ್ದಾರೆ’ ಎಂದು ದೂರಿದರು, ಕೇರಳ ಮತ್ತು ಕೇಂದ್ರ ಸರ್ಕಾರವು ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹಿಂಸಾಚಾರ ನಿರತ ದುಷ್ಕರ್ಮಿಗಳ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಮುಖಂಡರಾದ ತಿಮ್ಮೇಗೌಡ, ಲಕ್ಷ್ಮೀನಾರಾಯಣ, ಗುರುಪ್ರಸಾದ್, ಮಹಾಲಿಂಗು ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.