ADVERTISEMENT

ಹೆಣ್ಣು ಮಗು ಕೊಲೆಗೆ ಯತ್ನಿಸಿದ ತಂದೆ

ಆರೋಪಿ ಬಂಧನ: ಚಿಕಿತ್ಸೆ ಪಡೆಯುತ್ತಿರುವ ಕೂಸು

​ಪ್ರಜಾವಾಣಿ ವಾರ್ತೆ
Published 5 ಮೇ 2015, 9:44 IST
Last Updated 5 ಮೇ 2015, 9:44 IST

ಚನ್ನಪಟ್ಟಣ:  ತಾಲ್ಲೂಕಿನ ಅಂಬಾಡಹಳ್ಳಿ ಗ್ರಾಮದಲ್ಲಿ ಒಂದು ತಿಂಗಳ ಹೆಣ್ಣು ಮಗುವಿಗೆ ತಂದೆಯೇ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಶಿವಕುಮಾರ್ ಎಂಬಾತ ಈ   ಕೃತ್ಯವೆಸಗಿರುವ ವ್ಯಕ್ತಿ.

ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಅಸಮಾಧಾನದಿಂದ ವಿಷ ಉಣಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಶಿವಕುಮಾರ್ ಹಾಗೂ ವೀಣಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಹೆಣ್ಣು  ಹುಟ್ಟಿದ ಕಾರಣಕ್ಕೆ ಬೇಸರಗೊಂಡಿದ್ದ ಈತ ಪತ್ನಿ ಜತೆ ಆಗಾಗ್ಗೆ ಜಗಳ ತೆಗೆಯುತ್ತಿದ್ದ. 

ಶುಕ್ರವಾರ  ರಾತ್ರಿ ಶಿವಕುಮಾರ್ ಮಗುವನ್ನು ಆಟವಾಡಿಸುವ ನೆಪದಲ್ಲಿ  ತೋಟಕ್ಕೆ ಕರೆದೊಯ್ದು ಕೀಟನಾಶಕ ಕುಡಿಸಿ ಮತ್ತೆ ಮನೆಯಲ್ಲಿ ತಂದು ಮಲಗಿಸಿದ್ದಾನೆ. ತೀವ್ರ ಅಸ್ವಸ್ಥವಾದ ಮಗುವನ್ನು  ನೋಡಿದ ಆತನ ಪತ್ನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಅಲ್ಲಿ ಮಗುವನ್ನು ಪರೀಕ್ಷೆ ಮಾಡಿದ ವೈದ್ಯರು ವಿಷ ಉಣಿಸಿರುವ ವಿಷಯ ತಿಳಿಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ. ನಂತರ ಪತ್ನಿ ವೀಣಾ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ವಸಂತಕುಮಾರ್ ಮತ್ತು ಸಿಬ್ಬಂದಿ ಅಂಬಾಡಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಶಿವಕುಮಾರ್‌ನನ್ನು ಬಂಧಿಸಿದ್ದಾರೆ.

‘ಆತ ತಾನೇ ವಿಷ ಉಣಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ತೀವ್ರ ಅಸ್ವಸ್ಥಗೊಂಡಿರುವ ಮಗು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.