ADVERTISEMENT

ಹೊಸ ಕೊಳವೆಬಾವಿ ಕೊರೆಸಿದರೆ ತಲೆದಂಡ

ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಸಭೆಯಲ್ಲಿ ಶಾಸಕ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 7:41 IST
Last Updated 4 ಮಾರ್ಚ್ 2017, 7:41 IST
ರಾಮನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಕುಡಿಯುವ ನೀರು ಸರಬರಾಜಿಗೆ ಸಂಬಂಧಸಿದಂತೆ ಶುಕ್ರವಾರ ನಡೆದ ಸಭೆಯಲ್ಲಿ ತಹಶೀಲ್ದಾರ್‌ ಎನ್‌. ರಘುಮೂರ್ತಿ ಮಾತನಾಡಿದರು
ರಾಮನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಸಿದಂತೆ ಶುಕ್ರವಾರ ನಡೆದ ಸಭೆಯಲ್ಲಿ ತಹಶೀಲ್ದಾರ್‌ ಎನ್‌. ರಘುಮೂರ್ತಿ ಮಾತನಾಡಿದರು   

ರಾಮನಗರ: ‘ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸರ್ಕಾರ ಕೊರೆಯಿಸಿದ ಕೊಳವೆ ಬಾವಿ ಅಕ್ಕಪಕ್ಕದಲ್ಲಿ ಖಾಸಗಿ ವ್ಯಕ್ತಿಗಳಿಗೆ ಕೊಳವೆಬಾವಿ ಕೊರೆಸಲು ಅನುಮತಿ ನೀಡಿದಲ್ಲಿ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಕ್ರಮಕೈಗೊಳ್ಳಲಾಗುವುದು’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದರು.

‘ಸರ್ಕಾರಿ ಕೊಳವೆಬಾವಿ ಕೊರೆಸಿದ ಸುತ್ತಮುತ್ತ ಯಾರಾದರು ಮತ್ತೊಂದು ಕೊಳವೆ ಬಾವಿ ಕೊರೆಸಲು ಸಂಸದರು, ಶಾಸಕರಿಂದ ಒತ್ತಡ ಹೇರಿದರು ಎಂದು ಅಧಿಕಾರಿಗಳು ಮಣಿಯಬಾರದು. ಇಲ್ಲದಿದ್ದರೆ ತಲೆದಂಡ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುವ ಗ್ರಾಮಗಳಲ್ಲಿ 1200 ರಿಂದ 1300 ಅಡಿವರೆಗೆ ಕೊಳವೆ ಬಾವಿ ಕೊರೆಸಿ ನೀರು ಪೂರೈಸಬೇಕು. ಇಷ್ಟು ಸಾಮರ್ಥ್ಯದ ಕೊಳವೆಬಾವಿ  ಕೊರೆಯುವ ಏಜೆನ್ಸಿಗಳಿಗೆ ಅವಕಾಶ ನೀಡಬೇಕು’ ಎಂದು ತಿಳಿಸಿದರು.

‘ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರು ಪೂರೈಸುವ ಸಂಬಂಧ ಅಧಿಕಾರಿಗಳು ಕ್ರಮ ವಹಿಸಬೇಕು. ಕೊಳವೆ ಬಾವಿ ಕೊರೆಸಲು ಮತ್ತು ಮೋಟಾರ್ ಪಂಪ್ ಅಳವಡಿಸುವ ಸಂಬಂಧ ಶಾಸಕರ ನಿಧಿಯಿಂದ ಹಣ ಬಿಡುಗಡೆ ಮಾಡಿಸುತ್ತೇನೆ. ಆದರೆ, ಪೈಪ್‌ಲೈನ್‌ ಒದಗಿಸುವ ಕೆಲಸವನ್ನು ಜಿಲ್ಲಾಧಿಕಾರಿ ಮಾಡಲಿ. ಈ ಸಂಬಂಧ ಅಧಿಕಾರಿಗಳು ಪಟ್ಟಿ ಸಲ್ಲಿಸಬೇಕು’ ಎಂದು ತಿಳಿಸಿದರು.

‘ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸುವವರೆಗೆ ಸುಮ್ಮನೆ ಕೂರದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ. ಟ್ಯಾಂಕರ್ ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಇಲ್ಲದಿದ್ದರೆ ಹಣ ಪಾವತಿ ಮಾಡಲು ತೊಂದರೆಯಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಟ್ಯಾಂಕರ್‌ಗಳನ್ನು ಖರೀದಿಸುವುದು ಸೂಕ್ತ. ಇದರಿಂದ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ. ಬೇಕಾದರೆ ನಾನು ಟ್ಯಾಂಕರ್ ಖರೀದಿಸಲು ಹಣ ಬಿಡುಗಡೆ ಮಾಡುತ್ತೇನೆ’ ಎಂದರು.

‘ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಹೀಗಾಗಿ ಕಣ್ವ ಜಲಾಶಯದ ಹಿನ್ನೀರಿನಲ್ಲಿ ಹಾಗೂ ವೈಜಿಗುಡ್ಡದಲ್ಲಿ ಗೋಶಾಲೆ ತೆರೆಯಲು ನಿರ್ಧರಿಸಲಾಗಿದೆ’ ಎಂದರು. 

ಇದಕ್ಕೆ ತಹಸೀಲ್ದಾರ್ ಎನ್‌. ರಘುಮೂರ್ತಿ ಪ್ರತಿಕ್ರಿಯಿಸಿ ‘ಈಗಾಗಲೇ ಗೋಶಾಲೆಗೆ 100 ಟನ್ ಮೇವು ಪೂರೈಸಲು ಕ್ರಮ ವಹಿಸಲಾಗಿದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ಮೇವು ಖರೀದಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಲ್ಲೂಕಿನ ಜಾಲಮಂಗಲ, ಲಕ್ಷ್ಮಿಪುರ,  ಬೈರಮಂಗಲ, ಕಂಚುಗಾರನಹಳ್ಳಿ, ಕೂಟಗಲ್ , ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ
ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ಉಪಾಧ್ಯಕ್ಷೆ ಲಕ್ಷ್ಮಮ್ಮದಾಸಪ್ಪ, ಸದಸ್ಯ ಪ್ರಕಾಶ್ , ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್ ಇತರರು ಮತ್ತಿತರರು ಉಪಸ್ಥಿತರಿದ್ದರು.

*
ಕೊಳವೆ ಬಾವಿ ಕೊರೆಸಿದ ಮೇಲೂ ನೀರು ಸಿಗದಿದ್ದರೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ಖಾಸಗಿ ಕೊಳವೆಬಾವಿಗಳಿದ್ದರೆ ಅದರ ಮಾಲೀಕರು ಒಪ್ಪದಿದ್ದರೆ ಬಲವಂತವಾಗಿ ಸ್ವಾಧೀನ ಪಡಿಸಿಕೊಂಡು ನೀರು ಪೂರೈಸಬೇಕು.
-ಎಚ್.ಸಿ. ಬಾಲಕೃಷ್ಣ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT