ADVERTISEMENT

40ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 9:00 IST
Last Updated 6 ಸೆಪ್ಟೆಂಬರ್ 2017, 9:00 IST

ಚನ್ನಪಟ್ಟಣ: ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತೆರಳಲು ಮಂಗಳವಾರ ಬೆಳಿಗ್ಗೆ ಹೊರಟಿದ್ದ ಬಿಜೆಪಿ ಬೈಕ್ ರ್‍ಯಾಲಿಗೆ ತಾಲ್ಲೂಕಿನಲ್ಲಿ ಪೊಲೀಸರು ತಡೆಯೊಡ್ಡಿ, 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆಯಿತು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ನೇತೃತ್ವದಲ್ಲಿ ಹೊರಟಿದ್ದ ರ್‍ಯಾಲಿಯನ್ನು ಪುರ ಪೊಲೀಸ್ ಠಾಣೆ ಎದುರು ಪೊಲೀಸರು ತಡೆದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು.

ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತೆರಳಲು ಕಾರ್ಯಕರ್ತರು ಹೊರಟಿದ್ದರು. ಹೆದ್ದಾರಿಗೆ ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರು ಎಲ್ಲರನ್ನು ಬಂಧಿಸಿ ಸರ್ಕಾರಿ ಬಸ್‌ನಲ್ಲಿ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದರು.

ADVERTISEMENT

ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಕಾಂಗ್ರೆಸ್ ಸಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿದ್ದರಾಮಯ್ಯ ಸರ್ಕಾರ ರ್‍ಯಾಲಿಗೆ ತಡೆಯೊಡ್ಡುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು. ಇಂತಹ ಸಣ್ಣತನದ ರಾಜಕಾರಣದಿಂದ ಬಿಜೆಪಿ ಕುಗ್ಗುವುದಿಲ್ಲ, ರ್‍ಯಾಲಿ ನಿಗದಿಯಂತೆ ನಡೆಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಕೋಮ ಸೌಹಾರ್ದದ ನೆಪದಲ್ಲಿ ರ್‍ಯಾಲಿ ಹತ್ತಿಕ್ಕುವ ಹುನ್ನಾರ ನಡೆಸಿದೆ. ಹಿಂದೂಗಳ ಮೇಲಾಗಿರುವ ದೌರ್ಜನ್ಯದ ವಿರುದ್ಧ ಜನಜಾಗೃತಿ ಮೂಡಿಸಲು ಹೋಗುತ್ತಿರುವ ನಮ್ಮನ್ನು ಗಲಭೆ ಎಬ್ಬಿಸಲು ಹೋಗುತ್ತಿದ್ದಾರೆ ಎನ್ನುವಂತೆ ಕಾಂಗ್ರೆಸ್ ನೋಡುತ್ತಿದೆ. ಮುಂದಿನ ಚುನಾವಣೆಯಲ್ಲಿ ನಮಗೆ ಸೋಲು ಖಚಿತ ಎನ್ನುವ ಭಯ ಕಾಂಗ್ರೆಸಿಗರನ್ನು ಕಾಡುತ್ತಿದೆ ಎಂದು ಕಾರ್ಯಕರ್ತರು ಕಿಡಿಕಾರಿದರು.

ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಗೋಪಿನಾಥ್, ನಾರಾಯಣಸ್ವಾಮಿ, ಎಸೈಗಳಾದ ಶಿವಕುಮಾರ್, ಪ್ರಕಾಶ್ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಇದ್ದರು. ಮಧ್ಯಾಹ್ನ 3 ಗಂಟೆಯವರೆಗೆ ಡಿಎಆರ್ ಮೈದಾನದಲ್ಲಿಯೆ ಬಿಜೆಪಿ ಕಾರ್ಯಕರ್ತರನ್ನು ಇರಿಸಿಕೊಂಡಿದ್ದ ಪೊಲೀಸರು ಆನಂತರ ಅವರನ್ನೆಲ್ಲಾ ಬಿಡುಗಡೆ ಮಾಡಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ, ಬಿಜೆಪಿ ನಗರ ಬ್ಲಾಕ್ ಅಧ್ಯಕ್ಷ ವಿಷಕಂಠು, ವಿವಿಧ ಘಟಕಗಳ ಪದಾಧಿಕಾರಿಗಳಾದ ಆನಂದ್, ಜಯರಾಮು, ಸೋಮಶೇಖರ್, ಪಾರ್ಥ, ಹನಿಯೂರು ಸಿದ್ದೇಗೌಡ, ಲೋಕೇಶ್, ನವೀನ್, ರಾಘು ಬಂಧನವಾದವರಲ್ಲಿ ಸೇರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.