ADVERTISEMENT

6 ತಿಂಗಳ ಹೆಣ್ಣು ಚಿರತೆ ಮರಿ ಸಾವು

ರಾಮನಗರ ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 20 ಮೇ 2016, 19:41 IST
Last Updated 20 ಮೇ 2016, 19:41 IST
ಅಪಘಾತದಲ್ಲಿ ಮೃತಪಟ್ಟ ಚಿರತೆ ಮರಿಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರಾದ ನಜೀರ್‌ ಮತ್ತು ಕೃತಿಕಾ ನಡೆಸಿದರು.
ಅಪಘಾತದಲ್ಲಿ ಮೃತಪಟ್ಟ ಚಿರತೆ ಮರಿಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರಾದ ನಜೀರ್‌ ಮತ್ತು ಕೃತಿಕಾ ನಡೆಸಿದರು.   

ರಾಮನಗರ: ತಾಲ್ಲೂಕಿನ ಚಿಕೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಚಿರತೆಯ ಮರಿಯೊಂದು ವಾಹನಕ್ಕೆ ಸಿಲುಕಿ ಮೃತಪಟ್ಟಿದೆ. ಬೆಳಿಗ್ಗೆ 6.30ರ ಸುಮಾರಿಗೆ ಚಿರತೆಯು ಗ್ರಾಮದ ಅರಳಿಮರದ ಬಳಿ ರಸ್ತೆ ದಾಟುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿತು ಎಂದು ಸ್ಥಳೀಯರು ತಿಳಿಸಿದರು. ಚಿಕೇನಹಳ್ಳಿ ಗ್ರಾಮವು ನಗರದಿಂದ ಕೇವಲ ಮೂರು ಕಿಲೋಮೀಟರ್‌ ದೂರದಲ್ಲಿದೆ.

ಗ್ರಾಮಕ್ಕೆ ಹೊಂದಿ ಕೊಂಡಂತೆ ಇರುವ ಗುಡ್ಡಗಳಲ್ಲಿ ಚಿರತೆಗಳು ವಾಸವಿದ್ದು, ಈ ಭಾಗದಲ್ಲಿ ಅವುಗಳ ಓಡಾಟ ಸಾಮಾನ್ಯವಾಗಿದೆ. ಗ್ರಾಮದ ಸಮೀಪದಲ್ಲೇ ಹೆಣ್ಣು ಚಿರತೆಯೊಂದು ಮೂರು ಮರಿಗಳೊಂದಿಗೆ ಓಡಾಡಿಕೊಂಡಿದೆ. ಇದು ಅದರದ್ದೇ ಮರಿಯಾಗಿರಬಹುದು ಎಂದು ಸ್ಥಳೀಯರಾದ ಮಹಾದೇವ ಎಂಬುವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರರಿಂದ ಎಂಟು ತಿಂಗಳ ವಯಸ್ಸಿನ ಹೆಣ್ಣು ಚಿರತೆ ಇದಾಗಿದೆ. ಅಪಘಾತದಿಂದ ಮಾರಣಾಂತಿಕ ಗಾಯವಾಗಿ, ಶ್ವಾಸ ಕೋಶದ ಬಳಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಾದ ನಜೀರ್‌ ಹಾಗೂ ಕೃತಿಕಾ ‘ಪ್ರಜಾವಾಣಿ’ಗೆ ತಿಳಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಚಿರತೆ ದೇಹವನ್ನು ಅರಣ್ಯ ಪ್ರದೇಶದಲ್ಲೇ ಸುಡಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.