ADVERTISEMENT

77ಎಕರೆಗೆ ₹980 ಕೋಟಿ ನಿಗದಿ: ಸರ್ಕಾರಕ್ಕೆ ವರದಿ

ಬಿಡದಿ ಬಳಿ ಜಮೀನು ಒತ್ತುವರಿ ಪ್ರಕರಣ: ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲಾಡಳಿತದ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 9:29 IST
Last Updated 6 ಅಕ್ಟೋಬರ್ 2015, 9:29 IST

ರಾಮನಗರ: ಬಿಡದಿ ಬಳಿ ಮೆಷರ್‌್ಸ ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಲಿಮಿಟೆಡ್‌ ಮಾಲೀಕತ್ವದ ‘ಈಗಲ್‌ಟನ್ ಗಾಲ್ಫ್‌ ರೆಸಾರ್ಟ್‌’ ಒತ್ತುವರಿ ಮಾಡಿರುವ 77.19 ಎಕರೆ ಜಮೀನಿಗೆ ಜಿಲ್ಲಾಡಳಿತವು ₹980.05 ಕೋಟಿ ನಿಗದಿ ಮಾಡಿ ಈಗಾಗಲೇ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದೆ.

ಈ ಕಂಪೆನಿಯು ಇಲ್ಲಿ ಒಟ್ಟು 509.38 ಎಕರೆ ಪ್ರದೇಶ ಹೊಂದಿದ್ದು ಅದರಲ್ಲಿ, 28.33 ಎಕರೆ ಸರ್ಕಾರಿ ಗೋಮಾಳ ಆಗಿದ್ದರೆ, 77.19 ಎಕರೆ ವ್ಯವಸಾಯ ಮಾಡಲಾಗದ ಒಡ್ಡು, ಗುಡ್ಡೆ ಪ್ರದೇಶ, ಹಳ್ಳ, ಕೊಳ್ಳ, ಕೊರಕಲು, ಬೀಳು ಸೇರಿದಂತೆ ‘ಎ’ ಕರಾಬು, ‘ಬಿ’ ಕರಾಬು ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪ ಇದೆ.

‘ಈ 77.19 ಎಕರೆ ಜಮೀನಿನಲ್ಲಿ ಕೆಲವನ್ನು ರೈತರಿಂದ ಕಂಪೆನಿಯು ಖರೀದಿಸಿದೆ. ಕೆಲವೂ ನೋಂದಣಿಯೂ ಆಗಿವೆ. ಆದರೆ ಈ ದಾಖಲೆ, ಪತ್ರಗಳು ಸರಿ ಇಲ್ಲ. ಅಲ್ಲದೆ ‘ಎ’ ಮತ್ತು ‘ಬಿ’ ಕರಾಬು ಜಮೀನು ಕೂಡ ಇಲ್ಲಿದೆ. ಹಾಗಾಗಿ ಅದಕ್ಕೆ ಸೂಕ್ತ ಬೆಲೆ ನಿಗದಿ ಮಾಡಿ, ಆ ಕಂಪೆನಿಗೆ ಜಮೀನು ಮಂಜೂರು ಮಾಡುವಂತೆ ಸುಪ್ರೀಂಕೋರ್ಟ್‌ ಆದೇಶಿದೆ. ಅದರಂತೆ ಜಿಲ್ಲಾಡಳಿತ ಬೆಲೆ ನಿಗದಿಪಡಿಸಿದೆ’ ಎಂದು   ಅಧಿಕಾರಿಯೊಬ್ಬರು ತಿಳಿಸಿದರು.

ವಿವಿಧ ಸಂದರ್ಭದಲ್ಲಿ ವಿವಿಧ ಬೆಲೆ ನಿಗದಿ: ಜಿಲ್ಲೆಯಲ್ಲಿ ಬೇರೆ ಬೇರೆ ವರ್ಷದಲ್ಲಿ ಅಧಿಕಾರದಲ್ಲಿದ್ದ ನಾಲ್ಕು ಜಿಲ್ಲಾಧಿಕಾರಿಗಳು ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ 77.19 ಎಕರೆಗೆ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ಬೆಲೆಯನ್ನು ನಿಗದಿಪಡಿಸಿದ್ದಾರೆ.

2011ರ ಜುಲೈನಲ್ಲಿ ಈ ಜಮೀನಿಗೆ ₹3.75 ಕೋಟಿಯನ್ನು ಆಗಿನ ಜಿಲ್ಲಾಧಿಕಾರಿ ಚಕ್ರವರ್ತಿ ಮೋಹನ್‌ ಅವರು ನಿಗದಿ ಮಾಡಿದ್ದರು. ಬಳಿಕ 2012ರಲ್ಲಿ (ಮಾರ್ಚ್‌) ಎಸ್‌.ಪುಟ್ಟಸ್ವಾಮಿ ಅವರು ಜಿಲ್ಲಾಧಿಕಾರಿ ಆಗಿದ್ದಾಗ ₹ 82.63 ಕೋಟಿ ನಿಗದಿಪಡಿಸಿದ್ದರು. ಆ ನಂತರ 2013ರಲ್ಲಿ (ಜನವರಿ) ಜಿಲ್ಲಾಧಿಕಾರಿಯಾಗಿದ್ದ ವಿ. ಶ್ರೀರಾಮರೆಡ್ಡಿ ಅವರು ಸಹ ರೂ 82.63 ಕೋಟಿಯನ್ನೇ ನಿಗದಿ ಮಾಡಿದ್ದರು.

₹ 980.05 ಕೋಟಿ ನಿಗದಿ: ಆ ನಂತರ ರಾಮನಗರಕ್ಕೆ ಜಿಲ್ಲಾಧಿಕಾರಿ ಆಗಿ ಬಂದ ಡಾ. ವಿಶ್ವನಾಥ್‌ ಅವರು 2014ರ ಮೇ ತಿಂಗಳಲ್ಲಿ 77.19 ಎಕರೆಗೆ ಒಟ್ಟಾರೆಯಾಗಿ ₹ 289.56 ಕೋಟಿ ನಿಗದಿ ಮಾಡಿದರು. ಪ್ರಸ್ತುತ ಜಿಲ್ಲಾಧಿಕಾರಿ ಆಗಿರುವ ಎಫ್‌.ಆರ್‌. ಜಮಾದಾರ್‌ ಅವರು ಮಾರ್ಗಸೂಚಿ ದರ, ಮಾರುಕಟ್ಟೆ ಬೆಲೆ, ಕೆಟಿಸಿಪಿ ಕಾಯ್ದೆಗಳನ್ನು ಪರಿಶೀಲಿಸಿ 2014ರ ಜೂನ್‌ನಲ್ಲಿ ₹980.05 ಕೋಟಿ ಬೆಲೆಯನ್ನು ನಿಗದಿಪಡಿಸಿ, ಸರ್ಕಾರಕ್ಕೆ ಕಳುಹಿಸಿದ್ದಾರೆ.

ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಲಿಮಿಟೆಡ್‌ ಮತ್ತು ಈಗಲ್‌ಟನ್‌ ಗಾಲ್ಫ್‌ ರೆಸಾರ್ಟ್‌ 77.19 ಎಕರೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದೆ. ಅಲ್ಲದೆ ಇದು ಪರಿವರ್ತಿತ ಭೂಮಿಯಲ್ಲ (ಎನ್‌.ಎ), ಇಲ್ಲಿನ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿಯನ್ನೂ ಪಡೆದಿಲ್ಲ ಎಂಬ ವಿಷಯವನ್ನು ಜಿಲ್ಲಾಧಿಕಾರಿ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಈ ಕಂಪೆನಿ ತಾನು ನಿರ್ಮಿಸಿರುವ ಬಡಾವಣೆಯಲ್ಲಿ ನಿವೇಶನಗಳನ್ನು ಮಾರಾಟ ಮಾಡಿದೆ. ಅದರಲ್ಲಿ ಅತ್ಯಧಿಕ ಎಂದರೆ ಚದರ ಅಡಿಗೆ ₹ 2,904ರಂತೆ ಮಾರಾಟವಾಗಿದ್ದು, ಅದು ನೋಂದಣಿಯೂ ಆಗಿದೆ. ಹಾಗಾಗಿ ಅದೇ ಮೊತ್ತವನ್ನು ಜಿಲ್ಲಾಧಿಕಾರಿ ಅವರು ಮಾರುಕಟ್ಟೆ ಬೆಲೆ ಎಂದು ತೆಗೆದುಕೊಂಡಿದ್ದಾರೆ. ಅದರಂತೆ ಒಟ್ಟಾರೆ 33,74,811 ಚದರ ಅಡಿ (77.19 ಎಕರೆ) ವಿಸ್ತೀರ್ಣದ ಭೂಮಿಗೆ ₹980.05 ಕೋಟಿಯನ್ನು ನಿಗದಿ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದನ್ನು ಆಧರಿಸಿ ಸರ್ಕಾರವು ಸಂಪುಟ ಉಪ ಸಮಿತಿ ರಚಿಸಿದೆ. ಸಮಿತಿಯು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

***
ಸುಪ್ರೀಂಕೋರ್ಟ್‌ ಆದೇಶದಂತೆ ಭೂಮಿಗೆ ಬೆಲೆ ನಿಗದಿ ಮಾಡಿದ್ದೇನೆ. ಉಳಿದ ವಿಷಯ ಸರ್ಕಾರ ಮತ್ತು ಸಂಪುಟ ಉಪ ಸಮಿತಿಗೆ ಬಿಟ್ಟದ್ದು.
-ಎಫ್‌.ಆರ್‌.ಜಮಾದಾರ್‌,
ಜಿಲ್ಲಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.