ADVERTISEMENT

ಕ್ರೀಡಾಪಟುಗಳಿಗೆ ಶಿಕ್ಷಕರ ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 15:46 IST
Last Updated 31 ಜುಲೈ 2018, 15:46 IST
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಮಾತನಾಡಿದರು
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಮಾತನಾಡಿದರು   

ಚನ್ನಪಟ್ಟಣ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕ್ರೀಡೆಯ ಬಗ್ಗೆ ಆಸಕ್ತಿ ಇರುತ್ತದೆ. ಇದನ್ನು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದರೆ ಮನೆಗೊಬ್ಬ ಕ್ರೀಡಾಪಟುವನ್ನು ಹುಟ್ಟುಹಾಕಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ಹೇಳಿದರು.

ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿರುಪಾಕ್ಷಿಪುರ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಲು ಕ್ರೀಡಾಕ್ಷೇತ್ರ ಸಹಕಾರಿಯಾಗಿದೆ. ಕ್ರೀಡೆಗೆ ಜಗತ್ತನ್ನೇ ಮೈಮರೆಸುವ ಶಕ್ತಿ ಇದೆ ಎಂಬುದಕ್ಕೆ ಫುಟ್ ಬಾಲ್, ಕ್ರಿಕೆಟ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳೇ ಸಾಕ್ಷಿಯಾಗಿವೆ. ಮಕ್ಕಳು ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಕ್ಷೇತ್ರದ ಬಗ್ಗೆಯೂ ಆಸಕ್ತಿ ವಹಿಸಬೇಕು ಎಂದರು.

ADVERTISEMENT

ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಸತತ ಪ್ರಯತ್ನದಿಂದ ಯಾವುದೇ ಗುರಿ ತಲುಪಲು ಸಾಧ್ಯ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಕ್ರೀಡಾ ಮನೋಭಾವದಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮದ್ದೂರಯ್ಯ ಮಾತನಾಡಿ, ತಾಲ್ಲೂಕಿನ ಹಲವಾರು ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಿ ಕೀರ್ತಿ ತಂದಿದ್ದಾರೆ. ಇನ್ನಷ್ಟು ಕ್ರೀಡಾಪಟುಗಳನ್ನು ದೇಶದ ಕ್ರೀಡಾಕ್ಷೇತ್ರಕ್ಕೆ ಕೊಡುಗೆ ನೀಡಲು ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಉತ್ತಮ ತರಬೇತಿ ಸಿಕ್ಕರೆ ಒಳ್ಳೆಯ ಕ್ರೀಡಾಪಟುವನ್ನು ಕೊಡುಗೆ ನೀಡಿದಂತಾಗುತ್ತದೆ ಎಂದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಜಯರಾಮೇಗೌಡ, ಕೆ.ಎಸ್.ನಾಗರಾಜು, ಶಿಕ್ಷಣ ಸಂಯೋಜಕ ಸಿದ್ದರಾಮೇಗೌಡ, ವಿಷಯ ಪರಿವೀಕ್ಷಕ ನರಸಿಂಹಯ್ಯ, ವಿರುಪಾಕ್ಷಿಪುರ ಹೋಬಳಿ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.