ADVERTISEMENT

ಅಧಿಕಾರಿಗಳ ಕಾರ್ಯಕ್ಕೆ ಶಾಸಕರ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:11 IST
Last Updated 18 ಫೆಬ್ರುವರಿ 2017, 5:11 IST
ಸೊರಬ:  ‘ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅಧಿಕಾರಿಗಳಿಂದ ಸಂಪೂರ್ಣ ಸಹಕಾರ ದೊರೆತಿದೆ’ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು. 
 
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಗರ್‌ಹುಕುಂ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿದಾರರಿಗೆ ನೀಡಿದ ಮಾತಿನಂತೆ ಭೂಮಿಯ ಹಕ್ಕು ಪಡೆಯಲು ರೈತರು ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡಿ ಅರ್ಧದಷ್ಟು ಹಕ್ಕುಪತ್ರ ವಿತರಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಿ ಹಕ್ಕುಪತ್ರ ವಿತರಿಸಲಾಗುವುದು’ ಎಂದು ಭರವಸೆ ನೀಡಿದರು. 
 
‘ವಿವಿಧ ನಮೂನೆಯಡಿ ಸಲ್ಲಿಕೆಯಾದ 45 ಸಾವಿರ ಅರ್ಜಿಗಳಲ್ಲಿ 24 ಸಾವಿರ ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಸರಿಯಾದ ದಾಖಲೆಗಳಿಲ್ಲದೇ 16 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿವೆ. ನಮೂನೆ 50 ಹಾಗೂ 53ರಡಿ ಸಲ್ಲಿಕೆಯಾದ 25,618 ಅರ್ಜಿಗಳಲ್ಲಿ 100 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಇನ್ನೆರಡು ಸಭೆಗಳಲ್ಲಿ ಅವುಗಳನ್ನೂ ಇತ್ಯರ್ಥಗೊಳಿಸಿ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು. 
 
‘ಗೋಮಾಳ ಭೂಮಿಗೆ ಹಕ್ಕು ಪಡೆಯಲು ತಾಲ್ಲೂಕಿನಿಂದ 1987 ಅರ್ಜಿಗಳು ಸಲ್ಲಿಕೆಯಾಗಿವೆ. ಗೋಮಾಳ ಭೂಮಿಗೆ ಹಕ್ಕು ಮಾನ್ಯ ಮಾಡಲು ಸರ್ಕಾರದಿಂದ ಶೀಘ್ರದಲ್ಲೇ ಆದೇಶ ಹೊರಬೀಳುವ ನಿರೀಕ್ಷೆಯಿದೆ. ಅವುಗಳನ್ನು ಇತ್ಯರ್ಥ ಪಡಿಸಲಾಗುವುದು’ ಎಂದರು.
‘ಪಟ್ಟಣದ ಕಾನಕೇರಿ ಬಡಾವಣೆಯ ಸರ್ವೆ ನಂ.113ರಲ್ಲಿ ಮನೆ ನಿರ್ಮಿಸಿಕೊಂಡ ಸಾವಿರಾರು ಬಡ ಕುಟುಂಬಗಳಿಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
 
‘ಸಾಗುವಳಿದಾರರ ಭೂಮಿ ಸರ್ವೆ ಕಾರ್ಯ ನಡೆದು ಭೂಮಿ ಮಂಜೂರಾತಿ ಹಂತದಲ್ಲಿರುವ ಬಗ್ಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ತಹಶೀಲ್ದಾರ್‌ ಚಂದ್ರಶೇಖರ್, ನಟರಾಜ್, ರಂಗನಾಥ್, ಬಗರ್ ಹುಕುಂ ಸಮಿತಿ ಸದಸ್ಯರಾದ ಮಾರ್ಯಪ್ಪ, ಸುರೇಶ್, ಎಂ.ಡಿ.ಶೇಖರ್, ಗಣಪತಿ ಮತ್ತಿತರರು ಹಾಜರಿದ್ದರು.  
 
‘ಶುಲ್ಕ ಪಾವತಿಸಿ ಹಕ್ಕುಪತ್ರ ಪಡೆಯಿರಿ’
 
‘ತಾಲ್ಲೂಕಿನ ಬಡ ಕುಟುಂಬಗಳಿಗೆ ಭೂಮಿ ಕೊಡಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕನಸು ಕಂಡಿದ್ದರು. ಶಾಸಕನಾಗಿ ನಾನು ಅಧಿಕಾರಿಗಳ ವಿಶ್ವಾಸ ಗಳಿಸಿ ಸಾಗುವಳಿದಾರರ ಹಾಗೂ ಬಂಗಾರಪ್ಪ ಅವರ ಕನಸು ಈಡೇರಿಸಿದ್ದೇನೆ. ಅರ್ಜಿದಾರರು ಸರ್ಕಾರಕ್ಕೆ ಕಟ್ಟಬೇಕಾದ ಶುಲ್ಕವನ್ನು ಪಾವತಿಸಿ ಹಕ್ಕುಪತ್ರ ಪಡೆದುಕೊಳ್ಳಬೇಕು’ ಎಂದು ಮಧು ಬಂಗಾರಪ್ಪ ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.