ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಏಳು ಮಹಿಳೆಯರ ಪೈಪೋಟಿ!

ಸೊರಬ ತಾಲ್ಲೂಕು ಪಂಚಾಯ್ತಿ ಚುನಾವಣೆ: ಜೆಡಿಎಸ್‌ನ 11 ಸ್ಥಾನಗಳಲ್ಲಿ 7 ಮಹಿಳಾ ಸದಸ್ಯರು

ಚಂದ್ರಹಾಸ ಹಿರೇಮಳಲಿ
Published 29 ಜೂನ್ 2016, 7:37 IST
Last Updated 29 ಜೂನ್ 2016, 7:37 IST

ಶಿವಮೊಗ್ಗ: ಸೊರಬ ತಾಲ್ಲೂಕು ಪಂಚಾಯ್ತಿಯ 19 ಸ್ಥಾನಗಳಲ್ಲಿ 11 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದ ಜೆಡಿಎಸ್‌ ಅಧಿಕಾರದ ಗದ್ದುಗೆ ಏರುತ್ತಿದೆ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಈಗಾಗಲೇ ಘೋಷಣೆಯಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ನಿಗದಿಯಾಗಿದೆ. ಜೆಡಿಎಸ್‌ನ 11 ನೂತನ ಸದಸ್ಯರಲ್ಲಿ 7 ಸದಸ್ಯರು ಮಹಿಳೆಯರೇ ಇದ್ದಾರೆ. ನಾಲ್ವರು ಮಾತ್ರ ಪುರುಷ ಸದಸ್ಯರು.

ಸಾಮಾನ್ಯ ಮಹಿಳಾ ಮೀಸಲಾತಿ ಅಡಿ ಆಯ್ಕೆಯಾದ ಕುಬಟೂರು ಕ್ಷೇತ್ರದ ರೇಣುಕಮ್ಮ ಮಂಜುನಾಥ್‌, ಹಳೇ ಸೊರಬ ಕ್ಷೇತ್ರದ ಇಂದಿರಾ ಕೃಷ್ಣಪ್ಪ, ಹೊಸಬಾಳೆ ಜ್ಯೋತಿ ನಾರಾಯಣಪ್ಪ ಹಾಗೂ ಉಳವಿ ಕ್ಷೆತ್ರದ ನಯನಾ ಶ್ರೀಪಾದ ಹೆಗಡೆ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಸಾಮಾನ್ಯ ಮಹಿಳಾ ಮೀಸಲಾತಿಯ ಕಾರಣ ಶಕುನವಳ್ಳಿ ಕ್ಷೇತ್ರದ ಅಂಜಲಿ ಸಂಜೀವ (ಬಿಸಿಎಂ ಎ ಭಾರಂಗಿ ಕ್ಷೇತ್ರದ ಲತಾ ಸುರೇಶ್  (ಪರಿಶಿಷ್ಟ ಪಂಗಡ), ಗುಡವಿ ಮಂಜಮ್ಮ ರಾಮಪ್ಪ (ಬಿಸಿಎಂ ಎ) ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಹೊಂದಿದ್ದಾರೆ. ಹಾಗಾಗಿ, ಅಧ್ಯಕ್ಷ ಸ್ಥಾನ ಅಲಂಕರಿಸಲು 7 ಮಹಿಳಾ ಸದಸ್ಯರೂ ಪೈಪೋಟಿಗೆ ಇಳಿದಿದ್ದಾರೆ.

ಬಿಜೆಪಿಯಲ್ಲಿ ಮಾವಲಿ ಕ್ಷೇತ್ರದ ಮೀನಾಕ್ಷಿ ನಿರಂಜನ್‌ (ಸಾಮಾನ್ಯ), ತಲಗುಂದ ಕ್ಷೇತ್ರದ ಕಮಲಾ ಕುಮಾರ್ (ಪರಿಶಿಷ್ಟ ಜಾತಿ), ಕಾಂಗ್ರೆಸ್‌ನಲ್ಲಿ ತತ್ತೂರು ಕ್ಷೇತ್ರದ ಮೀನಾಕ್ಷಮ್ಮ ಜಗದೀಶ್‌ (ಪರಿಶಿಷ್ಟ ಜಾತಿ) ಇದ್ದರೂ ಬಿಜೆಪಿ ಕೇವಲ 5 ಸ್ಥಾನ ಹಾಗೂ ಕಾಂಗ್ರೆಸ್‌ ಕೇವಲ 3 ಸ್ಥಾನಗಳಲ್ಲಿ ಗೆಲುವು ಪಡೆದ ಕಾರಣ ಎರಡು ಪಕ್ಷಗಳು ಹೊಂದಾಣಿ ಮಾಡಿಕೊಂಡರೂ ಅಗತ್ಯ  ಬಹುಮತಕ್ಕೆ 2 ಸ್ಥಾನದ ಕೊರತೆ ಎದುರಾಗಲಿದೆ. ಆದ್ದರಿಂದ ಕಾಂಗ್ರೆಸ್‌–ಬಿಜೆಪಿಗೆ  ಅಧ್ಯಕ್ಷ ಸ್ಥಾನ ಗಗನ ಕುಸುಮವಾಗಿದೆ.

ಸುರೇಶ್‌ಗೆ ಒಲಿದ ಉಪಾಧ್ಯಕ್ಷ ಸ್ಥಾನ: ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಎಣ್ಣೆಕೊಪ್ಪ ಕ್ಷೇತ್ರದ ಜೆಡಿಎಸ್‌ ಸದಸ್ಯ ಸುರೇಶ್‌ ಹನುಮಂತಪ್ಪ ಅವರು ಮಾತ್ರ ಆ ಜಾತಿಯ ಮಿಸಲಾತಿ ಅಡಿ ಆಯ್ಕೆ ಯಾದ ಸದಸ್ಯರಾಗಿದ್ದಾರೆ. ಹಾಗಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್‌ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಬಿಜೆಪಿಯಲ್ಲಿ ತಲಗುಂದ ಕ್ಷೇತ್ರದ ಕಮಲಾ ಕುಮಾರ್ (ಪರಿಶಿಷ್ಟ ಜಾತಿ ಮಹಿಳೆ), ಜಡೆ ಕ್ಷೇತ್ರದ ವಿಜಯ ಕುಮಾರ್‌ (ಪರಿಶಿಷ್ಟ ಜಾತಿ) ಹಾಗೂ ತತ್ತೂರು ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಮೀನಾಕ್ಷಮ್ಮ ಜಗದೀಶ್‌ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಇದ್ದರೂ ಬಹುಮತದ ಕೊರತೆಯ ಕಾರಣ ಅವರಿಗೆ ಉಪಾಧ್ಯಕ್ಷ ಸ್ಥಾನ ವಂಚಿತರಾಗಲಿದ್ದಾರೆ.

ಹಿಂದಿನ ತಾಲ್ಲೂಕು ಪಂಚಾಯ್ತಿ ಯಲ್ಲಿ ಮೂರೂ ಪಕ್ಷಗಳು ತಲಾ 6 ಸದಸ್ಯರನ್ನು ಹೊಂದಿದ್ದವು. ಕಳೆದ ಬಾರಿಯ 18 ಸ್ಥಾನದ ಜತೆಗೆ, ಕ್ಷೇತ್ರ ಪುನರ್‌ ವಿಂಗಡಣೆಯ ಪರಿಣಾಮ ಮತ್ತೊಂದು ಹೊಸ ಕ್ಷೇತ್ರ ಸೇರ್ಪಡೆಯಾಗಿತ್ತು. ಈ ಕಾರಣದಿಂದಾಗಿ ಈ ಬಾರಿ 19 ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.