ADVERTISEMENT

‘ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ’

ಶಿಕಾರಿಪುರ: ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 5:14 IST
Last Updated 7 ಮಾರ್ಚ್ 2017, 5:14 IST
ಶಿಕಾರಿಪುರ: ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ನೀಡಲು ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎನ್‌. ಅರುಣ್‌ ಕುಮಾರ್‌ ಟೀಕಿಸಿದರು. 
 
ಅರಣ್ಯ ಭೂಮಿ ಸಾಗುವಳಿ ದಾರರರಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಸಾಗುವಳಿದಾರರು ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
 
‘ಕೇಂದ್ರ ಸರ್ಕಾರ 2006–2007ರಲ್ಲಿ ಅರಣ್ಯಭೂಮಿ ಸಾಗುವಳಿ ಬುಡಕಟ್ಟು ಜನಾಂಗ ಹಾಗೂ ಇತರ ಪಾರಂಪರಿಕ ಅರಣ್ಯವಾಸಿ ಹಾಗೂ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕನ್ನು ನೀಡಲು ಆದೇಶಿಸಿದೆ. ಈ ಕಾಯ್ದೆಯಂತೆ ಪ್ರಸ್ತುತ ಎಸ್‌ಟಿ ಜನಾಂಗದವರಿಗೆ ಮಾತ್ರ ಭೂಮಿ ಮಂಜೂರಾತಿ ಹಕ್ಕುಪತ್ರ ನೀಡಲಾಗು ತ್ತಿದೆ. ಆದರೆ, ಪಾರಂಪರಿಕ ಅರಣ್ಯವಾಸಿ ಹಾಗೂ ಸಾಗುವಳಿದಾರರಾದ ಎಸ್ಸಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಇತರೆ ಜನಾಂಗದವರಿಂದ 2006ರಿಂದ 2016ರವರೆಗೆ ಅಧಿಕಾರಿಗಳು ಅರ್ಜಿ ಸ್ವೀಕರಿಸಿದರೂ ರೈತರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
‘ಉದ್ಯಮಿಗಳಿಗೆ ಸಾವಿರಾರು ಹೆಕ್ಟೇರ್ ಭೂಮಿ ನೀಡಲು ಸರ್ಕಾರ ಮುಂದಾಗುತ್ತದೆ. ಆದರೆ, ಹಲವು ತಲೆಮಾರುಗಳಿಂದ ಸಾಗುವಳಿ ಮಾಡಿದ ರೈತನಿಗೆ ಭೂಮಿಯ ಹಕ್ಕುಪತ್ರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಫಲಾನುಭವಿಗಳಿಗೆ ಭೂಮಿ ಹಕ್ಕು ಕೊಡಲು ಸರ್ಕಾರ ಗಮನಹರಿಸಬೇಕು. ಹಕ್ಕುಪತ್ರ ವಿತರಿಸುವ ಕಾರ್ಯವನ್ನು ಮಾಡದಿದ್ದರೆ ತಾಲ್ಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು. 
 
ಹಿರೇಜಂಬೂರು ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ‘ಇತರೆ ಪಾರಂಪರಿಕ ಅರಣ್ಯವಾಸಿ ಹಾಗೂ ಸಾಗುವಳಿ ದಾರರಿಗೆ ಭೂಮಿ ಹಕ್ಕುಪತ್ರ ನೀಡುವಂತೆ ಸಮಾಜ ಕಲ್ಯಾಣ ಅಧಿಕಾರಿ ಯನ್ನು ಕೇಳಿದರೆ ಅರಣ್ಯ ಇಲಾಖೆಗೆ ಅರ್ಜಿ ರವಾನಿಸಿದ್ದೇವೆ ಎನ್ನುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಹಕ್ಕುಪತ್ರ ನೀಡಲು ಕಾನೂನಿನ ತೊಡಕಿದ್ದು, ಕ್ಯಾಬಿನೆಟ್‌ನಲ್ಲಿ ತಿದ್ದುಪಡಿಯಾಗಬೇಕು ಎಂಬ ಕಾರಣ ಹೇಳುತ್ತಾರೆ. ಆದರೆ, ಬಡ ರೈತರ ಅರ್ಜಿಗಳು ಮಾತ್ರ ಅರಣ್ಯ ಇಲಾಖೆ ಕಚೇರಿಯಲ್ಲಿ ಕೊಳೆಯುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಚುನಾವಣೆ ಬಂದಾಗ ಬಗರ್‌ ಹುಕುಂ ರೈತರ ಪರ ಹೋರಾಟ ನಡೆಸುವುದನ್ನು ಬಿಟ್ಟು, ಕಾನೂನು ತಿದ್ದುಪಡಿ ನಡೆಸಲು ಜನಪ್ರತಿನಿಧಿಗಳು ಮುಂದಾಗಬೇಕು. ಸಂಸದ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚಿಸಿ ಬಡವರಿಗೆ ಭೂಮಿ ಕೊಡಿಸಲು ಕಾನೂನು ತಿದ್ದುಪಡಿ ಮಾಡಿಸಬೇಕು ಎಂದು ಒತ್ತಾಯಿಸಿದರು. 
 
ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರು ಹಾಗೂ ಸಾಗುವಳಿದಾರರಾದ ಕೊಟ್ರೇಶಪ್ಪ, ಬಷೀರ್‌ ಖಾನ್‌, ಬಸವರಾಜಪ್ಪ, ಉಜ್ಜಪ್ಪ, ನಾಗರಾಜಪ್ಪ, ರಾಮಾನಾಯ್ಕ, ಹಾಲಪ್ಪ, ಗಂಗಮ್ಮ, ಲಕ್ಷ್ಮೀಬಾಯಿ, ಹನುಮಮ್ಮ, ಸಾವಿತ್ರಮ್ಮ, ಬಸಮ್ಮ, ಆಮ್‌ಅದ್ಮಿ ಪಕ್ಷದ ಪ್ರಕಾಶ್‌ ಕೋನಾಪುರ ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.