ADVERTISEMENT

ಅಸಮಾನತೆ ನಿವಾರಣೆ ಎಲ್ಲರ ಪ್ರಯತ್ನದ ಫಲ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:00 IST
Last Updated 15 ಏಪ್ರಿಲ್ 2017, 9:00 IST

ಶಿವಮೊಗ್ಗ: ‘ಅಸಮಾನತೆ ನಿವಾರಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸ ಬೇಕು’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಯುವಜನರು ದೇಶದಲ್ಲಿ ಇರುವ ಅಸಮಾನತೆ ನಿರ್ಮೂಲನೆ ಮಾಡಲು ಶ್ರಮ ವಹಿಸಬೇಕು’ ಎಂದರು.

‘ಪ್ರತಿ ಪ್ರಜೆಗೂ ಸಮಾನಹಕ್ಕು, ಸ್ವಾತಂತ್ರ್ಯ ದೊರಕಬೇಕು ಎನ್ನುವುದು ಅಂಬೇಡ್ಕರ್ ಅವರ ಕನಸಾಗಿತ್ತು. ಆ ಕನಸು ಸಾಕಾರಗೊಳಿಸಲು ರಾಷ್ಟ್ರಕ್ಕೆ ಸಮರ್ಥ ಸಂವಿಧಾನ ನೀಡಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಆದ್ಯತೆ ನೀಡಿದ್ದಾರೆ’ ಎಂದು ಶ್ಲಾಘಿಸಿದರು.‘ಎಲ್ಲಾ ಜಾತಿ, ಧರ್ಮದವರೂ ಕೀಳರಿಮೆ ದೂರಮಾಡಿ ಶಿಕ್ಷಣ ಪಡೆ ಯಲು ಮುಂದಾಗಬೇಕು. ರಾಜ್ಯ ಸರ್ಕಾರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ನಡೆಸಿದೆ. ಈಗಾಗಲೇ ವರದಿ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ವರದಿ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯನಾಯ್ಕ ಮಾತನಾಡಿ, ‘ಅಂಬೇ ಡ್ಕರ್ ಸಾಮಾಜಿಕ ನ್ಯಾಯ ದೊರಕಿಸಿ ಕೊಡಲು ಹೋರಾಡಿದ್ದ ಮಹಾನ್ ನಾಯಕ. ಅಸ್ಪೃಶ್ಯತೆ ಹೋಗಲಾಡಿಸಲು, ಸಮಾನತೆ ಮೂಡಿಸಲು ಅಂಬೇಡ್ಕರ್ ಸಾಕಷ್ಟು ಶ್ರಮಪಟ್ಟಿದ್ದರು. ಮಹಿಳೆಯರ ಸಮಾನತೆಗೂ ಹೋರಾಟ ನಡೆಸಿದ್ದರು. ದೇಶಕ್ಕೆ ಸಂವಿಧಾನ ನೀಡುವ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ’ ಎಂದು ಶ್ಲಾಘಿಸಿದರು.

ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮೇಯರ್ ಏಳುಮಲೈ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಉಪ ಮೇಯರ್ ರೂಪಾ ಲಕ್ಷ್ಮಣ್, ಪಾಲಿಕೆ ಆಯುಕ್ತೆ ತುಷಾರಮಣಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಸಿಇಒ ಡಾ.ರಾಕೇಶ್ ಕುಮಾರ್, ಪಾಲಿಕೆ ಸದಸ್ಯ ಎಚ್‌. ಫಾಲಾಕ್ಷಿ, ಯೋಗೀಶ್, ಸತೀಶ್, ಗೋವಿಂದಪ್ಪ, ರೇಖಾ ಚಂದ್ರಶೇಖರ್, ಎನ್.ಜೆ. ರಾಜಶೇಖರ್, ದಲಿತ ಸಂಘಟನೆಯ ಮುಖಂಡ ಎಂ. ಗುರುಮೂರ್ತಿ, ರಂಗಪ್ಪ, ಕರ್ನಾಟಕ ಸಾಹಿತ್ಯ ಪರಿಷತ್ ಸದಸ್ಯ ಡಾ.ವಡ್ಡಗೆರೆ ನಾಗರಾಜ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮೊದಲು ಮಹಾನಗರ ಪಾಲಿಕೆ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಮೆರವಣಿಗೆ ಹೊರಟಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ಅಂಬೇಡ್ಕರ್ ಭವನದಲ್ಲಿ ಮುಕ್ತಾಯಗೊಂಡಿತು.

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.