ADVERTISEMENT

ಆರೋಗ್ಯ ಸೇವೆಯಲ್ಲಿ ಶುಶ್ರೂಷಕರ ಪಾತ್ರ ಹಿರಿದು

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:07 IST
Last Updated 19 ಮೇ 2017, 5:07 IST

ಶಿವಮೊಗ್ಗ: ಶುಶ್ರೂಷಕರು ರೋಗಿಗಳಿಗೆ ತಾರತಮ್ಯ ಮಾಡದೇ ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಶ್ಲಾಘಿಸಿದರು.
ಜಿಲ್ಲಾ ಮೆಗ್ಗಾನ್‌ ಬೋಧನಾ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯರು ದಿನಕ್ಕೆ ನೂರಾರು ರೋಗಿಗಳ ಆರೋಗ್ಯ ತಪಾಸಣೆ ಮಾಡುತ್ತಾರೆ.  ಪ್ರಸಿದ್ಧ ವೈದ್ಯರಿಗೆ ಸಹಾಯಕರಾಗಿ ಶುಶ್ರೂಷಕರು ಶ್ರಮಿಸುತ್ತಾರೆ. ಆರೋಗ್ಯ ಸೇವೆಯಲ್ಲಿ ಎಲ್ಲರ ಪಾತ್ರವೂ ಅನನ್ಯ’ ಎಂದರು.

ವೈದ್ಯಕೀಯ ಕಾಲೇಜು ಕಟ್ಟಡ ಕಟ್ಟಿದರೆ ಸಾಲದು. ಅದರ ನಿರ್ವಹಣೆ ಮುಖ್ಯ. ಶಿವಮೊಗ್ಗ ಜಿಲ್ಲಾ ಆಸ್ಪತ್ರೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲು ಶುಶ್ರೂಷಕರ ಶ್ರಮವೂ ಕಾರಣ. ಆಸ್ಪತ್ರೆಯ ಸೇವೆ ಗುರುತಿಸಿ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಈ ವರ್ಷದಿಂದ 150 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುಮತಿ ದೊರೆತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಕುಟುಂಬದಿಂದ ತಿರಸ್ಕೃತಗೊಂಡ ರೋಗಿಗಳನ್ನೂ ಶುಶ್ರೂಷಕಿಯರು ಆರೈಕೆ ಮಾಡುತ್ತಾರೆ. ಕೆಲಸದಲ್ಲಿ ಹಣ ಮುಖ್ಯವಲ್ಲ. ಮಾನವೀಯತೆ ಮುಖ್ಯ ಎಂದರು.‘ನಿಸ್ವಾರ್ಥ ಸೇವೆ ಸಲ್ಲಿಸಿದ ಶುಶ್ರೂಷಕರನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಂತಹ ಪ್ರಶಸ್ತಿಗೆ ಶಿವಮೊಗ್ಗ ನಗರದ ಶುಶ್ರೂಷಕರು ಭಾಜನರಾಗಿರುವುದು ಹೆಮ್ಮೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ‘ಶುಶ್ರೂಷಕರು ಗುಣಮಟ್ಟದ ಸೇವೆ ನೀಡಬೇಕು, ಸಾರ್ವಜನಿಕರು, ರೋಗಿಗಳ ಜತೆ  ಪ್ರೀತಿಯಿಂದ ನಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಶಿವಮೊಗ್ಗ ವೈದ್ಯಕೀಯ ಮಹಾ ವಿದ್ಯಾಲಯದ ನಿರ್ದೇಶಕ ಸುಶೀಲ್ ಕುಮಾರ್ ಮಾತನಾಡಿ, ‘ಶುಶ್ರೂಷಕರನ್ನು ಪ್ರೋತ್ಸಾಹಿಸುವ ಸಲುವಾಗಿ ಕ್ರೀಡಾ ಚಟುವಟಿಕೆ ಆಯೋಜಿಸಲಾಗಿದೆ’ ಎಂದರು.

ತಾಲ್ಲೂಕಿನಲ್ಲಿ ಉತ್ತಮ ಸೇವೆ ನೀಡಿದ ಶುಶ್ರೂಷಕರನ್ನು ಸನ್ಮಾನಿಸ ಲಾಯಿತು. ಬೋಧನಾ ಆಸ್ಪತ್ರೆಯ ಕಾರ್ಯದರ್ಶಿ ಮೋಹನ್‌ಕುಮಾರ್, ಖಜಾಂಚಿ ಶಾಂತರಾಜ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಬೋಧನಾ ಸಲಹಾ ಸಮಿತಿ ಸದಸ್ಯ ಎಸ್.ಚಿನ್ನಪ್ಪ , ಜಿಲ್ಲಾ ಆರೊಗ್ಯ ಇಲಾಖೆಯ ಸಂಘದ ಅಧ್ಯಕ್ಷ   ನಂಜುಂಡಸ್ವಾಮಿ    ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.