ADVERTISEMENT

ಆಶ್ರಯ ಹಗರಣ ಸಿಐಡಿಗೆ ವಹಿಸಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 5:00 IST
Last Updated 27 ಜುಲೈ 2017, 5:00 IST
ಶಿವಮೊಗ್ಗ ನಗರ ಪಾಲಿಕೆ ಸಭಾಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿಯಮ ಬಾಹಿರ ಖಾತೆ ಮಾಡಿದ ದಾಖಲೆ, ಪರವಾನಗಿ ಇಲ್ಲದೇ ವಾಣಿಜ್ಯ ವಸತಿ ಗೃಹ ಆರಂಭಿಸಿದ ದಾಖಲೆ ಪ್ರದರ್ಶಿಸಿದರು.
ಶಿವಮೊಗ್ಗ ನಗರ ಪಾಲಿಕೆ ಸಭಾಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿಯಮ ಬಾಹಿರ ಖಾತೆ ಮಾಡಿದ ದಾಖಲೆ, ಪರವಾನಗಿ ಇಲ್ಲದೇ ವಾಣಿಜ್ಯ ವಸತಿ ಗೃಹ ಆರಂಭಿಸಿದ ದಾಖಲೆ ಪ್ರದರ್ಶಿಸಿದರು.   

ಶಿವಮೊಗ್ಗ: ಆಶ್ರಯ ನಿವೇಶನಗಳ ಖಾತೆ ಬದಲಾವಣೆಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣ ಸಿಐಡಿಗೆ ವಹಿಸಲು ನಗರಪಾಲಿಕೆ ಸಾಮಾನ್ಯ ಸಭೆ ಬುಧವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿತು. ಮೇಯರ್‌ ಎನ್‌.ಏಳುಮಲೈ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಮೋಹನ್ ರೆಡ್ಡಿ, ಮಾಲತೇಶ್ ಹಗರಣ ಕುರಿತು ದಾಖಲೆ ಪ್ರದರ್ಶಿಸಿದರು.

ಹಂಚಿಕೆಯಾದ ಫಲಾನುಭವಿಗಳ ಹೆಸರಿಗೆ ಹಕ್ಕುಪತ್ರ ಇದ್ದರೂ ಪಾಲಿಕೆ ಅಧಿಕಾರಿಗಳು ಸಂಬಂಧವೇ ಇಲ್ಲದವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಮಧ್ಯವರ್ತಿಗಳ ಮೂಲಕ ಭಾರಿ ಹಗರಣ ನಡೆದಿದೆ ಎಂದು ಆರೋಪಿಸಿದರು.

ಮೇಯರ್‌ ಹಾಗೂ ಆಯುಕ್ತರ ಗಮನಕ್ಕೆ ಬಾರದೇ ಉಪ ಆಯುಕ್ತರು ಹಲವು ಅಕ್ರಮ ಎಸಗಿದ್ದಾರೆ. ತನಿಖೆ ನಡೆಸಿ ಆರೋಪದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷದ ನಾಯಕ ನಾಗರಾಜ್ ಕಂಕಾರಿ, ಎಚ್‌.ಪಾಲಾಕ್ಷಿ ಒತ್ತಾಯಿಸಿದರು.

ADVERTISEMENT

ವಿಧಾನಪರಿಷತ್‌ ಸದಸ್ಯ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ‘ನಿವೇಶನ ಖಾತೆ  ಬದಲಾವಣೆ ಹಿಂದೆ ದೊಡ್ಡ ಜಾಲವೇ ಇದೆ. ಹೊರಗಿನ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಸಮಿತಿ ಮಾಡಿ  ಸಮಗ್ರ ತನಿಖೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪಂಡಿತ್‌ ವಿ. ವಿಶ್ವನಾಥ್, ‘ಈ ಹಿಂದೆ ಕಂದಾಯ ನಿವೇಶನಗಳಲ್ಲಿ ಕಟ್ಟಿಕೊಂಡಿದ್ದ ಮನೆಗಳ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು. ವರದಿ ನೀಡಿದ ನಂತರವೂ ಏನೂ ಪ್ರಯೋಜನವಾಗಲಿಲ್ಲ. ಅಂಥ ಮನೆಗಳಿಗೂ ಮೆಸ್ಕಾಂ ವಿದ್ಯುತ್‌ ಸಂಪರ್ಕ ಕಲ್ಪಿಸಿದೆ. ಹಾಗಾಗಿ, ಸಮಿತಿ ರಚನೆ ಬೇಡ’ ಎಂದರು.

ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ‘ಆಶ್ರಯ ನಿವೇಶನಗಳ ಖಾತೆ ಬದಲಾವಣೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಕುರಿತು ಆಶ್ರಯ ಸಮಿತಿ ಸಭೆಯಲ್ಲೂ ಚರ್ಚಿಸಲಾಗಿದೆ. ಒಬ್ಬರ ಹೆಸರಿಗೆ ಹಕ್ಕುಪತ್ರ ಇದ್ದರೆ, ಅದೇ ನಿವೇಶನ ಮೂರ್‍ನಾಲ್ಕು ಜನರ ಹೆಸರಿಗೆ ಖಾತೆಯಾಗಿದೆ. ಹಾಗಾಗಿ, ಇಡೀ ಪ್ರಕರಣ ಸಿಐಡಿಗೆ ಅಥವಾ ಎಸಿಬಿಗೆ ವಹಿಸಬೇಕು.   

3,800 ನಿವೇಶನ ಗಳನ್ನೂ ಕೂಲಂಕಷವಾಗಿ  ಪರಿಶೀಲಿಸಿ, ನಿಜವಾದ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಶಾಸಕರ ಸಲಹೆಗೆ ಮನ್ನಣೆ ನೀಡಿದ ಸಭೆ ಪ್ರಕರಣ ಸಿಐಡಿಗೆ ವರ್ಗಾಯಿಸಲು ಸರ್ವಾನುಮತದ ನಿರ್ಣಯ ಅಂಗೀಕರಿಸಿತು. ಮೇಯರ್ ಏಳುಮಲೈ ನಿರ್ಧಾರ ಅಧಿಕೃತವಾಗಿ ಘೋಷಿಸಿದರು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಐಡಿ ತನಿಖೆ ಮುಗಿಯುವವರೆಗೂ ಆರೋಪಿ ಅಧಿಕಾರಿಗಳನ್ನು ರಜೆ ಮೇಲೆ ಕಳುಹಿಸ ಬೇಕು ಎಂದು ಆಗ್ರಹಿಸಿದರು.
ಸದಸ್ಯ ಯೋಗೀಶ್ ಮಾತನಾಡಿ, ‘ವಾಣಿಜ್ಯ ಪರವಾನಗಿ ಪಡೆಯದೇ ದುರ್ಗಿಗುಡಿ  ಮುಖ್ಯ ರಸ್ತೆಯಲ್ಲೇ ವಾಣಿಜ್ಯ ವಸತಿಗೃಹ ತೆರೆಯಲಾಗಿದೆ. ಪಾಲಿಕೆಗೆ ಸೇರಿದ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಕೂಡಲೇ ಬಾಗಿಲು ಬಂದ್‌ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಸದಸ್ಯರಾದ ನರಸಿಂಹ ಮೂರ್ತಿ, ರೇಖಾ ಚಂದ್ರಶೇಖರ್, ಸುರೇಖಾ ಮುರಳೀಧರ್ ಮಾತನಾಡಿ, ವಾರ್ಡ್‌ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ಸಮಸ್ಯೆ ಕುರಿತು ದೂರಿದರು.
ಪಾಲಿಕೆ ವಿದ್ಯುತ್ ವಿಭಾಗದ ಅಧಿಕಾರಿಗಳಿಗೆ ನೀಡಿರುವ ಕಾರುಗಳನ್ನು ಹಿಂಪಡೆಯಬೇಕು.

ಅವರು ದ್ವಿಚಕ್ರ ವಾಹನದಲ್ಲೇ ಎಲ್ಲ ವಾರ್ಡ್‌ಗಳ ಇಕ್ಕಟ್ಟಾದ ರಸ್ತೆಗಳನ್ನು ಸುತ್ತಬೇಕು. ಆಗ ಮಾತ್ರ ಸಮಸ್ಯೆ ಗಮನಕ್ಕೆ ಬರುತ್ತದೆ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್, ಎನ್.ಜೆ.ರಾಜಶೇಖರ್ ಸಭೆಯ ಗಮನಕ್ಕೆ ತಂದರು. ಕೂಡಲೇ, ಕ್ರಮ ಕೈಗೊಳ್ಳುವಂತೆ ಆಯುಕ್ತ ಮುಲ್ಲೈ ಮುಹಿಲನ್‌ ಸೂಚಿಸಿದರು. ಉಪ ಮೇಯರ್ ರೂಪಾ ಲಕ್ಷ್ಮಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.