ADVERTISEMENT

ಏತ ನೀರಾವರಿ ಪೂರ್ಣಗೊಳಿಸಲು ಆಗ್ರಹ

ತುಂಗಾ ಮೇಲ್ದಂಡೆ ಕಚೇರಿ ಮುಂದೆ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 5:10 IST
Last Updated 15 ಜುಲೈ 2017, 5:10 IST

ಶಿವಮೊಗ್ಗ: ಕಾಲಮಿತಿ ಒಳಗೆ ತುಂಗಾ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ಯೋಜನೆ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತುಂಗಾ ಮೇಲ್ದಂಡೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ 50 ವರ್ಷಗಳಿಂದ ಹಾಯ್‌ಹೊಳೆ, ಆಯನೂರು ಭಾಗದ ಜನರು ಹೋರಾಟ ನಡೆಸಿದ್ದರು. ರೈತ ಸಂಘಟನೆಗಳೂ 30 ವರ್ಷಗಳಿಂದ ಹೋರಾಟ ನಡೆಸಿವೆ. ಹೋರಾಟಕ್ಕೆ ಮಣಿದ ಸರ್ಕಾರ ಯೋಜನೆ ಜಾರಿಗೆ ಅನುಮೋದನೆ ನೀಡಿತ್ತು. ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿತ್ತು. ಗುತ್ತಿಗೆ ಒಪ್ಪಂದದ ಪ್ರಕಾರ 2015 ಆಗಸ್ಟ್‌ನಲ್ಲೇ ಯೋಜನೆ ಪೂರ್ಣಗೊಳಿಸಬೇಕಿತ್ತು. ಆದರೆ, ಇಲ್ಲಿಯವರೆಗೂ ನೀರು ಹರಿಸಿಲ್ಲ ಎಂದು ದೂರಿದರು.

ಕಾಮಗಾರಿಯ ಅನುಷ್ಠಾನದಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ನೀರಾವರಿ ಇಲಾಖೆ, ಇಂಧನ ಇಲಾಖೆ ನಡುವೆ ಸಮನ್ವಯದ ಕೊರತೆ ಇದೆ. ಈ ಸಂಬಂಧ ಜೂನ್
23 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗಿತ್ತು. ಒಂದು ತಿಂಗಳ ಒಳಗೆ ನೀರು ಹಾಯಿಸುವುದಾಗಿ ಅವರು ನೀಡಿದ್ದ ಭರವಸೆ ಈಡೇರಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗೌಡನಕೆರೆ, ಹಾರನಹಳ್ಳಿ ಮತ್ತು ಆಯನೂರು ಹೋಬಳಿಯ ಹಾಯ್‌ಹೊಳೆ, ಬಾರೆಹಳ್ಳ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ಈ ಯೋಜನೆ ಅಡಿ ನೀರು ಪೂರೈಕೆಯಾಗಲಿದೆ. ಶಾಶ್ವತ ಬರಪೀಡಿತ ಗ್ರಾಮಗಳಿಗೆ ಯೋಜನೆಯಿಂದ ಸಾಕಷ್ಟು ಅನುಕೂಲವಿದೆ. ಹಾಗಾಗಿ, ತಕ್ಷಣ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಮುಖಂಡರಾದ ಕಡಿದಾಳು ಶಾಮಣ್ಣ, ಕೆ. ರಾಘವೇಂದ್ರ, ಹಿಟ್ಟೂರು ರಾಜು, ಡಾ.ಬಿ.ಎಂ. ಚಿಕ್ಕಸ್ವಾಮಿ, ಇ.ಬಿ. ಜಗದೀಶ್, ರಾಮಚಂದ್ರಪ್ಪ, ಟಿ.ಎಂ. ಚಂದ್ರಪ್ಪ, ಎಸ್.ಶಿವಮೂರ್ತಿ, ಪಂಚಾಕ್ಷರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

***

ಸರ್ಕಾರದಿಂದ ಕೆರೆ ನಾಶಕ್ಕೆ ಸಂಚು: ಬಸವರಾಜಪ್ಪ ಆರೋಪ

ಶಿವಮೊಗ್ಗ: ‘ಸರ್ಕಾರ ಕೆರೆ ನಾಶ ಮಾಡುವ ಕಾನೂನು ಜಾರಿಗೆ ತರಲು ಹೊರಟಿರುವುದು ಖಂಡನೀಯ. ಸರ್ಕಾರದ ನಡೆಯ ಹಿಂದೆ ಕೆರೆ ಕಬಳಿಕೆಯ ಹುನ್ನಾರ
ಅಡಗಿದೆ’ ಎಂದು ಎಚ್.ಆರ್. ಬಸವರಾಜಪ್ಪ ಆರೋಪಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಕಾಡು ನಾಶವಾಗುತ್ತಿದೆ. ಮತ್ತೊಂದು ಕಡೆ ಸರ್ಕಾರ ಡಿ ನೋಟಿಫೈ ಹೆಸರಿನಲ್ಲಿ ಹೊಸ ಕಾನೂನು ಮಾಡಲು ಹೊರಟಿದೆ. ಇದು ರಾಜ್ಯದ ರೈತರಿಗೆ ಮರಣಶಾಸನ. ಸರ್ಕಾರ ಕೆರೆ ಸಂರಕ್ಷಿಸುವ ಬದಲು ಮುಚ್ಚಿಹಾಕುವಂತಹ ಕಾರ್ಯದಲ್ಲಿ ತೊಡಗಿರುವುದು ಖಂಡನೀಯ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ
ದೂರಿದರು.

ಕೆರೆಗಳು ರೈತರ, ಜನರ ಜೀವನಾಡಿಗಳು. ಈಗಾಗಲೇ ಜನರ ದುರಾಸೆ ಪರಿಣಾಮ ಹಲವು ಕೆರೆಗಳು ಒತ್ತುವರಿಯಾಗುತ್ತಿದೆ. ಕೆಲವು ರಾಜಕಾರಣಿಗಳು, ಬಂಡವಾಳ ಶಾಹಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ ಇರುವ ಕೆರೆಕಟ್ಟೆ, ಕುಂಟೆ, ಸರೋವರ ತಕ್ಷಣ ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತಾಕೀತು ಮಾಡಿದೆ ಎಂದರು.

ಭೂಗಳ್ಳರು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಒತ್ತುವರಿ ಮಾಡಿಕೊಂಡು ನಿವೇಶನ, ಆಸ್ಪತ್ರೆ, ಶಾಲೆ, ಬಹುಮಹಡಿ ಕಟ್ಟಡ ಕಟ್ಟಿದ್ದಾರೆ. ಈ ಸಂಬಂಧ ಸ್ಪೀಕರ್ ಕೋಳಿವಾಡ ನೇತೃತ್ವದ ಸಮಿತಿ ವರದಿ ನೀಡುವುದಕ್ಕಿಂತ ಮುಂಚೆಯೇ ಈ ಕಾಯ್ದೆ ಜಾರಿಗೆ ತರಲು ಹೊರಟಿರುವುದು ಭೂ ಗಳ್ಳರಿಗೆ, ಪ್ರಭಾವಿ ವ್ಯಕ್ತಿಗಳಿಗೆ ರಕ್ಷಣೆ ಮಾಡುವ ತಂತ್ರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಡಿದಾಳು ಶಾಮಣ್ಣ, ಎಸ್.ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಕೆ. ರಾಘವೇಂದ್ರ, ಇ.ಬಿ. ಜಗದೀಶ್, ಡಾ. ಚಿಕ್ಕಸ್ವಾಮಿ, ರಾಮಚಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.