ADVERTISEMENT

ಕಲ್ಲು ಗಣಿಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 4:47 IST
Last Updated 15 ಮಾರ್ಚ್ 2017, 4:47 IST
ಕಲ್ಲು ಗಣಿಗಾರಿಕೆ ಹಾಗೂ ಡಾಂಬರ್ ಮಿಶ್ರಣ ಘಟಕಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ದೇವಕಾತಿಕೊಪ್ಪ, ಜಕಾತಿಕೊಪ್ಪದ ಗ್ರಾಮಸ್ಥರು ಶಿವಮೊಗ್ಗ  ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
ಕಲ್ಲು ಗಣಿಗಾರಿಕೆ ಹಾಗೂ ಡಾಂಬರ್ ಮಿಶ್ರಣ ಘಟಕಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ದೇವಕಾತಿಕೊಪ್ಪ, ಜಕಾತಿಕೊಪ್ಪದ ಗ್ರಾಮಸ್ಥರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಶಿವಮೊಗ್ಗ: ಕಲ್ಲು ಗಣಿಗಾರಿಕೆ ಹಾಗೂ ಡಾಂಬರ್ ಮಿಶ್ರಣ ಘಟಕವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ತಾಲ್ಲೂಕಿನ ದೇವಕಾತಿ
ಕೊಪ್ಪ, ಜಕಾತಿಕೊಪ್ಪ, ಬಸವೇಶ್ವರ ನಗರ, ಭೂತನಗುಡಿ, ಅಂಬೇಡ್ಕರ್ ನಗರದ ಗ್ರಾಮಸ್ಥರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍್ಯಾಲಿ ನಡೆಸಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ವಿನೋಬನಗರದ ಪೊಲೀಸ್ ಚೌಕಿ ವೃತ್ತದಿಂದ ಆರಂಭವಾದ ರ್‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.

ಕಲ್ಲು ಗಣಿಗಾರಿಕೆ ನಡೆಯುವ ಗ್ರಾಮಗಳ ಸುತ್ತಲೂ ಹಲವು ಕಲ್ಲು ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಘಟಕಗಳು ಜನವಸತಿ ಪ್ರದೇಶ
ಗಳಿಗೆ ಹೊಂದಿಕೊಂಡಂತೆಯೇ ಇದೆ. ಇದರಿಂದ ಸಾವಿರಾರು ಜನರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಪ್ರದೇಶದಲ್ಲಿ ಸುಮಾರು 30 ಜಲ್ಲಿ ಘಟಕಗಳು, 25 ಕಲ್ಲುಕ್ವಾರಿಗಳು ಹಾಗೂ ಡಾಂಬರ್ ಮಿಶ್ರಣದ ಐದು ಘಟಕಗಳಿವೆ. ಇವು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತವೆ. ಇದರಿಂದ ಶಬ್ದ, ವಾಯು ಹಾಗೂ ಭೂ ಮಾಲಿನ್ಯ ನಡೆಯುತ್ತಿದೆ. ಸರ್ಕಾರದ ನೀತಿ–ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದರು.

ಕಲ್ಲು ಗಣಿಗಳಲ್ಲಿ ಭಾರೀ ಪ್ರಮಾಣದ ಸ್ಫೋಟ ನಡೆಸಲಾಗುತ್ತಿದೆ. ಇದರಿಂದ ಮನೆಗಳು ಬಿರುಕು ಬಿಡುತ್ತಿವೆ. ಮನೆ ಆವರಣದಲ್ಲಿ ಕಲ್ಲು, ಮಣ್ಣು ಬೀಳುತ್ತಿದೆ. ಭೂಮಿಯ ಕಂಪನದಿಂದ ಅಂತರ್ಜಲದಲ್ಲಿಯೂ ಏರುಪೇರು ಆಗಿದೆ. ಬಾವಿ, ಅಂತರ್ಜಲ ಪ್ರಮಾಣದಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಜಮೀನಿನಲ್ಲಿ ಬೆಳೆಯುವ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಕ್ರಷರ್‌ಗಳಿಂದ ಭಾರೀ ಪ್ರಮಾಣದ ಧೂಳು ಹೊರಬರುತ್ತಿದೆ. ಕೃಷಿ ಜಮೀನು, ಮನೆ, ಕೆರೆ, ಬಾವಿಗಳು ಜಲ್ಲಿ ಧೂಳಿನಿಂದ ಆವೃತವಾಗುತ್ತಿವೆ. ನಾಗರಿಕರ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಉಂಟಾಗುತ್ತಿದೆ. ಜೀವನ ನಡೆಸುವುದೇ ಕಷ್ಟಕರವಾಗುತ್ತಿದೆ. ಈಗಾಗಲೇ ಹಲವು ಬಾರಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಕ್ರಷರ್, ಡಾಂಬರ್ ಮಿಶ್ರಣ ಘಟಕ ಸ್ಥಳಾಂತರಿಸಬೇಕು ಹಾಗೂ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತವು ಗ್ರಾಮಸ್ಥರಿಗೆ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮಸ್ಥರಾದ ವಿಜಯಕುಮಾರ್, ಉಮೇಶ್, ರಮೇಶ್, ಸುರೇಶ್, ಸಿದ್ದೇಶಪ್ಪ, ನಾಗರಾಜ, ಲೋಕೇಶ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**

ಗಣಿಗಾರಿಕೆಯಿಂದ ವಿದ್ಯಾರ್ಥಿಗಳ ಓದಿಗೆ ಹಾಗೂ ಹಿರಿಯರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ. ನಿಯಮ ಬಾಹಿರ ಗಣಿಗಾರಿಕೆ ನಿಯಂತ್ರಿಸಬೇಕು.
-ಡಿ.ಎಸ್.ಮಲ್ಲೇಶ್, ಗ್ರಾಮಸ್ಥ

**

ಗ್ರಾಮದಲ್ಲಿ ಸುಮಾರು 500 ಕುಟುಂಬ
ಗಳಿವೆ. ನಿವಾಸಿಗಳು ಶಾಂತಿಯಿಂದ ಬದುಕಬೇಕಾದರೆ, ಜಿಲ್ಲಾಡಳಿತ ಇಲ್ಲಿನ ಕಲ್ಲು ಕ್ವಾರಿಗಳನ್ನು ಸ್ಥಳಾಂತರಿಸಬೇಕು
-ಕೆ.ಎಸ್.ರಾಜಪ್ಪ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.