ADVERTISEMENT

‘ಕಾರ್ಗಲ್‌ ತಾಲ್ಲೂಕು ಕೇಂದ್ರವಾಗಲಿ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:30 IST
Last Updated 22 ಮಾರ್ಚ್ 2017, 6:30 IST

ಸಾಗರ: ‘ಕಾರ್ಗಲ್‌ ಅನ್ನು ತಾಲ್ಲೂಕು ಕೇಂದ್ರವಾಗಿ ಮಾರ್ಪಡಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್‌ ಒತ್ತಾಯಿಸಿದರು. ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಈ ಹಿಂದೆ ಎಂ.ಪಿ.ಪ್ರಕಾಶ್‌ ಅವರು ಕಂದಾಯ ಮಂತ್ರಿಯಾಗಿದ್ದಾಗ ಸಲ್ಲಿಸಿದ ಹುಂಡೇಕರ್‌ ವರದಿಯಲ್ಲಿ ಕಾರ್ಗಲ್‌ ಅನ್ನು ತಾಲ್ಲೂಕು ಕೇಂದ್ರವಾಗಿ ಘೋಷಿ
ಸುವಂತೆ ಶಿಫಾರಸು ಮಾಡಲಾಗಿತ್ತು. ಆದರೂ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಕಾರ್ಗಲ್‌ ಅನ್ನು ನೂತನ ತಾಲ್ಲೂಕನ್ನಾಗಿ ಘೋಷಣೆ ಮಾಡದಿರುವುದು ದುರದೃಷ್ಟಕರ’ ಎಂದರು.

‘ಕ್ಷೇತ್ರದ ಶಾಸಕರೂ ಆಗಿರುವ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿರುವಾಗಲೇ ಕಾರ್ಗಲ್‌ ತಾಲ್ಲೂಕು ಕೇಂದ್ರವಾಗಿ ಘೋಷಿಸುವ ಬಗ್ಗೆ ತೀರ್ಮಾನವಾಗಬೇಕಿತ್ತು. ಆದರೆ, ಇದು ಸಾಧ್ಯವಾಗದೆ ಇರುವುದು ಕಂದಾಯ ಮಂತ್ರಿಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ’ ಎಂದು ಟೀಕಿಸಿದರು.

ಈ ಸಂಬಂಧ ಪಕ್ಷಾತೀತವಾಗಿ ಸಂಘಟಿತ ಹೋರಾಟ ನಡೆಯಬೇಕಿದೆ. ಬಜೆಟ್‌ ಘೋಷಣೆಯಾದ ನಂತರವೂ ನೂತನ ತಾಲ್ಲೂಕು ಕೇಂದ್ರಗಳ ರಚನೆ ಸಂಬಂಧ ಮಾರ್ಪಾಡಿಗೆ ಅವಕಾಶವಿದ್ದು ಕಾರ್ಗಲ್‌ ಅನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸುವಂತೆ ಸಚಿವ ಕಾಗೋಡು ತಿಮ್ಮಪ್ಪ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

ಅಡಿಕೆಗೂ ಬರ ಪರಿಹಾರ ವಿತರಿಸಿ: ‘ರಾಜ್ಯ ಸರ್ಕಾರ ಬರ ಪರಿಹಾರ ವ್ಯಾಪ್ತಿಯಿಂದ ಅಡಿಕೆ ಬೆಳೆಯನ್ನು ಹೊರಗಿಡುವ ಮೂಲಕ ಅನ್ಯಾಯ ಎಸಗಿದೆ. ಬೆಳೆ ನಷ್ಟದಿಂದ ಸಣ್ಣ ಹಿಡುವಳಿದಾರರು ಕಂಗೆಟ್ಟಿದ್ದಾರೆ. ಸರ್ಕಾರ ತನ್ನ ನೀತಿಯನ್ನು ಬದಲಿಸಿ ಅಡಿಕೆ ಬೆಳೆಗಾರರಿಗೂ ಬರ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ತಾಲ್ಲೂಕಿನ ಹಲವು ಭಾಗಗಳಲ್ಲಿ ವಿದ್ಯುತ್‌ ಪೂರೈಕೆ ಸಮಸ್ಯೆ ಉದ್ಭವಿಸಿದೆ. ಸಚಿವ ಕಾಗೋಡು ತಿಮ್ಮಪ್ಪ ಮೆಸ್ಕಾಂ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆ ಬಗೆಹರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಸ್ಪರ್ಧೆಗೆ ನಾನೂ ಉತ್ಸುಕ’
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದೇನೆ’ ಎಂದು  ಟಿ.ಡಿ.
ಮೇಘರಾಜ್‌ ಹೇಳಿದರು.

‘1995ರಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು, ಈ ಭಾಗದಲ್ಲಿ ಪಕ್ಷಬಲಗೊಳ್ಳಲು ಶ್ರಮಿಸಿದ್ದೇನೆ. ಪಕ್ಷ ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT