ADVERTISEMENT

ಕುಂಸಿ ಠಾಣಾ ವ್ಯಾಪ್ತಿಯ ಹೆದ್ದಾರಿ ‘ತೀವ್ರ ಅಪಘಾತ ವಲಯ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 9:31 IST
Last Updated 5 ಸೆಪ್ಟೆಂಬರ್ 2017, 9:31 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಮಾತನಾಡಿದರು.   

ಶಿವಮೊಗ್ಗ: ನಿರಂತರ ಅಪಘಾತಗಳಿಗೆ ಮೂಲಕ ಹಲವು ಜನರ ಬಲಿ ಪಡೆದ ಕುಂಸಿ ಠಾಣಾ ವ್ಯಾಪ್ತಿಯ ಶಿವಮೊಗ್ಗ–ಸಾಗರ ರಸ್ತೆ (ರಾಷ್ಟ್ರೀಯ ಹೆದ್ದಾರಿ–206)ಯನ್ನು ತೀವ್ರ ಅಪಘಾತ ವಲಯ (ಬ್ಲ್ಯಾಕ್ ಸ್ಪಾಟ್) ಎಂದು ಘೋಷಿಸಲು ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಮಾಹಿತಿ ನೀಡಿದರು.

3 ತಿಂಗಳಲ್ಲಿ 15 ಸಾವು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿಯಮದ ಪ್ರಕಾರ 3 ತಿಂಗಳ ಅವಧಿಯಲ್ಲಿ 500 ಮೀಟರ್ ಅಂತರದಲ್ಲಿ ಹಲವು ಅಪಘಾತ ಸಂಭವಿಸಿ, 6ಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದರೆ ಅಂತಹ ರಸ್ತೆಗಳನ್ನು ‘ಅಪಘಾತ ವಲಯ’ ಎಂದು ಘೋಷಣೆ ಮಾಡಬಹುದು.

ADVERTISEMENT

ಅಪಘಾತ ವಲಯ ಘೋಷಣೆ ಮಾಡಿದರೆ ಇಂತಹ ರಸ್ತೆಗಳಲ್ಲಿ ವಿಶೇಷ ಅನುದಾನ ಬಳಸಿಕೊಂಡು ವೈಜ್ಞಾನಿಕ ರಸ್ತೆ ನಿರ್ಮಾಣ, ತಿರುವು, ಉಬ್ಬು ಸರಿಪಡಿಸುವುದು, ರಸ್ತೆಯ ಇಕ್ಕೆಲಗಳಲ್ಲಿ ಸೂಚನಾ ಫಲಕ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವಾಹನಗಳ ವೇಗ ನಿಯಂತ್ರಣ ಸೇರಿದಂತೆ ಹಲವು ಕ್ರಮ ಕೈಗೊಳ್ಳಬಹುದಾಗಿದೆ.

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಡೆದ 3 ಅಪಘಾತಗಳಲ್ಲಿ 15 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಮೇ 3ರಂದು ನಡೆದ ಅವಘಡದಲ್ಲಿ 7, ಮೇ 15ರಂದು 2 ಹಾಗೂ ಆಗಸ್ಟ್‌ನಲ್ಲಿ 6 ಜನ ಮೃತಪಟ್ಟಿದ್ದರು.

ರಸ್ತೆಯ ಭೌಗೋಳಿಕ ವಿನ್ಯಾಸ ಉಬ್ಬು, ತಗ್ಗುಗಳಿಂದ ಕೂಡಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ರಸ್ತೆ ಸಮತಟ್ಟು ಹಾಗೂ ನೇರಗೊಳಿಸುವುದು ಸೇರಿದಂತೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ ಎಂದರು.

ತಾತ್ಕಾಲಿಕ ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್, ಎಚ್ಚರಿಕೆ ಫಲಕ ಅಳವಡಿಕೆ, ಸಿಬ್ಬಂದಿ ನಿಯೋಜನೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಖಾಸಗಿ ಬಸ್‌ ನಿಯಂತ್ರಣಕ್ಕೆ ಸೂಚನೆ: ನಗರ ಸಾರಿಗೆ ಬಸ್‌ಗಳು ವಿವಿಧ ವೃತ್ತಗಳಲ್ಲಿ ನಿಲುಗಡೆ ಮಾಡುತ್ತಿವೆ. ಅಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕಾರಣ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅದಕ್ಕೆ ಅವಕಾಶ ನೀಡಬಾರದು. ಎನ್.ಟಿ. ರಸ್ತೆಯಲ್ಲಿ ರಸ್ತೆ ವಿಭಜಕ ಕಾಮಗಾರಿ ಪೂರ್ಣಗೊಳಿಸಬೇಕು. ಎಂ.ಆರ್‌.ಎಸ್‌ ವೃತ್ತದಿಂದ ತುಂಗಾ ಸೇತುವೆವರೆಗಿನ ರಸ್ತೆ ಕಾಮಗಾರಿ ಅಕ್ಟೋಬರ್ ಅಂತ್ಯದ ಒಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಮಯ ಪರಿಪಾಲನೆಗೆ ತಾಕೀತು: ಶಿವಮೊಗ್ಗ ಬಸ್‌ ನಿಲ್ದಾಣದಿಂದ ಹೊರಡುವ ಖಾಸಗಿ ಬಸ್‌ಗಳು ಸಮಯ ಪಾಲಿಸಬೇಕು. ನಿಲ್ದಾಣದ ಒಳಗೆ ಇತರೆ ವಾಹನಗಳು ಪ್ರವೇಶಿಸದಂತೆ ಕ್ರಮಕೈಗೊಳ್ಳಬೇಕು. ಪ್ರವೇಶ ದ್ವಾರದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ತಾಕೀತು ಮಾಡಿದರು.

ಜಂಟಿ ಸಾರಿಗೆ ಆಯುಕ್ತ ಶಿವರಾಜ ಬಿ. ಪಾಟೀಲ್ ಮಾತನಾಡಿ, ‘ಸುಪ್ರೀಂ ಕೋರ್ಟ್ ಆದೇಶದಂತೆ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು. ವಿಮಾ ಅವಧಿ ಮುಗಿದಿರುವ ವಾಹನ ಜಫ್ತಿ ಮಾಡಿ, ದಂಡ ವಿಧಿಸಲಾಗುವುದು’ ಎಂದರು. ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ ಪ್ರಶಾಂತ್, ಪೀರ್‌ ಪಾಷಾ, ಸಂಚಾರ ಠಾಣೆ ಪಿಎಸ್‌ಐ ಸಂತೋಷ್ ಕುಮಾರ್, ರಾಮ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.