ADVERTISEMENT

ಗೋ ರಕ್ಷಣೆಗೆ ಮೌನ ಕ್ರಾಂತಿಯಾಗಲಿ

ಗೋ ಪರಿವಾರ ಉದ್ಘೋಷಣೆ ಸಮಾರಂಭದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:26 IST
Last Updated 23 ಮಾರ್ಚ್ 2017, 5:26 IST

ಸಾಗರ: ‘ಜೀವನಪೂರ್ತಿ ನಮ್ಮನ್ನು ಪೊರೆಯುವ ಗೋವಿನ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಭದ್ರಕಾಳಿ ಸಭಾಭವನದಲ್ಲಿ ಮಂಗಳವಾರ ರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರ ಏರ್ಪಡಿಸಿದ್ದ ತಾಲ್ಲೂಕು ಗೋ ಪರಿವಾರದ ಉದ್ಘೋಷಣೆ ಹಾಗೂ ಗೋದೀಕ್ಷಾ ಕಾರ್ಯಕ್ರಮದಲ್ಲಿ ಗೋದೀಕ್ಷೆ ನೀಡಿ ಅವರು ಮಾತನಾಡಿದರು.

ಗೋ ಸಂರಕ್ಷಣೆ ಕೆಲಸ ಮೌನ ಕ್ರಾಂತಿಯ ಮೂಲಕ ನಡೆಯಬೇಕು. ಗೋದೀಕ್ಷೆ ಪಡೆದವರು ಗೋವಧಾ ಜನ್ಯದಿಂದ ಉತ್ಪಾದನೆಯಾಗುವ ವಸ್ತು
ಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು. ಗೋಜನ್ಯದಿಂದ ಉತ್ಪಾದನೆಯಾಗುವ ವಸ್ತುಗಳ ಖರೀದಿಯತ್ತ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಗೋವುಗಳನ್ನು ಸಾಕಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾದಾಗ ಮಾತ್ರ ಅವುಗಳನ್ನು ಗೋಶಾಲೆಗೆ ಬಿಡಬೇಕು. ಗೋಶಾಲೆಗಳ ಅಭಿವೃದ್ಧಿಗೆ ಗೋ ಪರಿವಾರ ಬದ್ಧವಾಗಿರಬೇಕು. ಗೋದೀಕ್ಷೆ ಪಡೆದವರು ಮನೆ ಮನೆಗೆ ತೆರಳಿ ಗೋವಿನ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಡಬೇಕು ಎಂದರು.

ರಾಮಚಂದ್ರಾಪುರ ಮಠವು ಸಾಗರ ತಾಲ್ಲೂಕಿನಲ್ಲಿ ಗೋ ಮತ್ತು ಮೇವು ಬ್ಯಾಂಕ್‌ ಸ್ಥಾಪಿಸಿ ಗವ್ಯೋದ್ಯಮ, ತಳಿ ಸಂವರ್ಧನಾ ಕೇಂದ್ರ, ಗವ್ಯ ವೈದ್ಯ ಶಾಲೆ ಸ್ಥಾಪನೆಗೆ ಅಗತ್ಯ ಸೌಲಭ್ಯ ಕಲ್ಪಿಸಲಿದೆ. ಗೋ ಪರಿವಾರದವರು ಇದಕ್ಕೆ ಅಗತ್ಯವಿರುವ ಸಹಕಾರ ನೀಡಬೇಕು ಎಂದು ಹೇಳಿದರು.

ಬರಗಾಲದಲ್ಲಿ ಗೋವುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಗೋ ಪರಿವಾರದವರು ಎಚ್ಚರ ವಹಿಸಬೇಕು. ಗೋವುಗಳಿಗೆ ಅಗತ್ಯವಿರುವ ಮೇವು ಹಾಗೂ ನೀರು ಪೂರೈಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ತ್ಯಾಗರ್ತಿ ಸಿದ್ದಗಂಗಾ ಆಶ್ರಮದ ಪರಮಹಂಸ ಶ್ರೀಧರ ದೀಕ್ಷಿತ್‌ ಸ್ವಾಮೀಜಿ, ಗೋ ಪರಿವಾರದ ತಾಲ್ಲೂಕು ಅಧ್ಯಕ್ಷ ಪ್ರವೀಣ್‌ ಬಣಕಾರ್‌, ಸಂಘ ಪರಿವಾರದ ಅ.ಪು.ನಾರಾಯಣಪ್ಪ ಹಾಜರಿದ್ದರು. ಪ್ರಶಾಂತ್‌ ಕೆ.ಎಸ್‌.ಸ್ವಾಗತಿಸಿದರು. ಮಧು ಗೋಮತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.