ADVERTISEMENT

ಠೇವಣಿ ಹಿಂಪಡೆಯಲು ಮುಗಿಬಿದ್ದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:26 IST
Last Updated 8 ಜುಲೈ 2017, 5:26 IST

ಶಿವಮೊಗ್ಗ: ಹಣಕಾಸು ನಿಯಂತ್ರಣ ಕ್ರಮಗಳನ್ನು ಪಾಲಿಸದ ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್‌ ಎಚ್ಚರಿಕೆ ನೀಡಿದ ಮಾಹಿತಿ ಬಹಿರಂಗವಾದ ನಂತರ ಠೇವಣಿ ಹಿಂಪಡೆಯಲು ಗ್ರಾಹಕರು ಶುಕ್ರವಾರ ಬ್ಯಾಂಕ್‌ನ ವಿವಿಧ ಶಾಖೆಗಳಿಗೆ ಮುಗಿಬಿದ್ದಿದ್ದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ  ಕೆ. ವೆಂಕಟೇಶ್ವರ ರಾವ್ ಈಚೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಬ್ಯಾಂಕ್‌ ನಿಯಮಕ್ಕೆ ಪೂರಕವಾಗಿ ಕಾರ್ಯನಿರ್ವಹಿಸದಿದ್ದರೆ ಪರವಾನಗಿ ರದ್ದು ಮಾಡಲು ಭಾರ ತೀಯ ರಿಸರ್ವ್‌ ಬ್ಯಾಂಕಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.

ನಗರದ ಬಾಲರಾಜ ಅರಸ್ ರಸ್ತೆಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಆವರಣದ ಶಾಖೆಗೆ ಬಂದ ಹಲವು ಗ್ರಾಹಕರು ತಕ್ಷಣ ಠೇವಣಿ ಹಣ ಮರಳಿಸುವಂತೆ ಆಗ್ರಹಿಸಿದರು.
ಬ್ಯಾಂಕ್‌ ಅಧಿಕಾರಿಗಳ ಸಮಾಧಾ ನದ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಗ್ರಾಹಕರು ಇರಲಿಲ್ಲ. ಠೇವಣಿ ಮೊತ್ತ ಹಿಂತಿರುಗಿಸದೇ ಮರಳುವುದಿಲ್ಲ ಎಂದು ಪಟ್ಟುಹಿಡಿದರು. ಈ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

‘ಡಿಸಿಸಿ ಬ್ಯಾಂಕ್‌ ಹಣಕಾಸು ವ್ಯವಹಾರ ಸರಿ ಇಲ್ಲ ಎಂಬ ಸುದ್ದಿ ಹಬ್ಬಿದೆ. ಹಾಗಾಗಿ, ಠೇವಣಿ ಇಟ್ಟಿರುವ ₹ 1 ಲಕ್ಷ ಹಿಂಪಡೆಯಲು ಬಂದಿದ್ದೇನೆ’ ಎಂದು ಹೋಟೆಲ್‌ ಕಾರ್ಮಿಕ ರಾಜಪ್ಪ ಹೇಳಿದರು.

ಠೇವಣಿ ಹಿಂಪಡೆಯಲು ಬಂದಿದ್ದ ಬಹುತೇಕ ಎಲ್ಲರದೂ ಇದೇ ಅಭಿ ಪ್ರಾಯವಾಗಿತ್ತು. ಅವರಲ್ಲಿ ಹೋಟೆಲ್‌ ಕಾರ್ಮಿಕರು, ದಿನಗೂಲಿಗಳು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಗ್ರಾಹಕರ ಒತ್ತಾಯಕ್ಕೆ ಮಣಿಯದ ಬ್ಯಾಂಕ್‌ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕೆಲವು ದಿನಗಳ ನಂತರ ಠೇವಣಿ ಹಿಂತಿರುಗಿಸುವ ಭರವಸೆ ನೀಡಿದರು. ಹಲವು ಠೇವಣಿದಾರರು ವಾಪಸ್‌ ತೆರಳಿದರೆ, ಕೆಲವರು ಪಟ್ಟುಬಿಡದೇ ಬ್ಯಾಂಕ್‌ನಲ್ಲೇ ಠಿಕಾಣಿ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.