ADVERTISEMENT

ಡಿ.15ರೊಳಗೆ ಮನೆ ಬಾಗಿಲಿಗೆ ಪಡಿತರ ಚೀಟಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 9:10 IST
Last Updated 14 ನವೆಂಬರ್ 2017, 9:10 IST
ಯು.ಟಿ.ಖಾದರ್
ಯು.ಟಿ.ಖಾದರ್   

ಶಿವಮೊಗ್ಗ : ಪಡಿತರ ಚೀಟಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ ಒಟ್ಟು ₹ 15 ಲಕ್ಷದ 50 ಸಾವಿರ ಫಲಾನುಭವಿಗಳಿಗೆ ಡಿ. 15ರೊಳಗೆ ತ್ವರಿತ ಅಂಚೆಯ ಮೂಲಕ ಅವರ ವಿಳಾಸಕ್ಕೆ ತಲುಪಿಸಲಾಗುವುದು ಎಂದು ಆಹಾರ ಸಚಿವ ಯು.ಟಿ.ಖಾದರ್‌ ಹೇಳಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಯಶಸ್ವಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಲ್ಲಿಕೆಯಾದ ಒಟ್ಟು 47,823 ಬಿಪಿಎಲ್‌ ಅರ್ಜಿಗಳಲ್ಲಿ 4 ಸಾವಿರ ಪಡಿತರ ಚೀಟಿಗಳನ್ನು ಈಗಾಗಲೇ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಹಿಂದೆ ಪಡಿತರ ಚೀಟಿ ಪಡೆಯಬೇಕಾಗಿದ್ದರೆ ಸಾಕಷ್ಟು ದಾಖಲೆಗಳನ್ನು ನೀಡಬೇಕಾಗಿತ್ತು. ಈಗ ಆಧಾರ್‌ ಕಾರ್ಡ್‌ ಒಂದಿದ್ದರೆ ಸಾಕು ಅವರು ಅರ್ಹರಿದ್ದಲ್ಲಿ ಅವರಿಗೂ ಪಡಿತರ ಚೀಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಇನ್ನೂ ವೈದ್ಯಕೀಯ, ಭಾಗ್ಯಲಕ್ಷ್ಮೀ, ಶಾದಿಭಾಗ್ಯ ಮತ್ತಿತರೆ ಸೌಲಭ್ಯ ಪಡೆಯುವವರು ಪಡಿತರ ಚೀಟಿ ಬೇಕಿದ್ದರೆ ಸೂಕ್ತ ದಾಖಲೆ ನೀಡಿದರೆ ಅವರಿಗೂ ಪಡಿತರ ಚೀಟಿ ನೀಡಲಾಗುವುದು ಎಂದರು.

ADVERTISEMENT

ರಾಜ್ಯದಲ್ಲಿರುವ ಅಲೆಮಾರಿಗಳು, ಚಿಂದಿ ಆಯುವವರು, ಕೂಲಿ ಕಾರ್ಮಿಕರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದಾಗ ಪಡಿತರ ಪಡೆಯಲು ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಪಾಯಿಂಟ್‌ ಆಫ್‌ ಸೆಲ್‌ ಹಾಕಲಾಗುತ್ತಿದೆ. ಈ ವ್ಯವಸ್ಥೆಯಿಂದ ಫಲಾನುವಭಿಗಳು ಎಲ್ಲಿ ಬೇಕಾದರೂ ಪಡಿತರ ಸ್ವೀಕರಿಸಬಹುದು ಎಂದು ಮಾಹಿತಿ ನೀಡಿದರು.

ಪಡಿತರ ವಿತರಕರು ಕಮೀಷನ್ ಹೆಚ್ಚಿಸುವಂತೆ ಅನೇಕ ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರೆ. ಮೊದಲು ಡಿಸೆಂಬರ್ ಅಂತ್ಯದೊಳಗೆ ನ್ಯಾಯಬೆಲೆ ಅಂಗಡಿಗಳನ್ನು ಆನ್‌ಲೈನ್‌ ವ್ಯವಸ್ಥೆ ತರಲಾಗುವುದು. ಶೇ 100ರಷ್ಟು ಪೂರ್ಣವಾದ ಬಳಿಕ ಅವರ ಕಮಿಷನ್ ಹೆಚ್ಚಿಸಲಾಗುತ್ತದೆ ಎಂದರು.

ಎಸ್ಇಸಿ ಪಟ್ಟಿಯಿಂದ ಕೈಬಿಟ್ಟು ಹೋದ ಬಿಪಿಎಲ್ ಕುಟುಂಬದವರಿಗೂ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅನಿಲ ಭಾಗ್ಯ ಯೋಜನೆ ತರಲಾಗಿದೆ. ದೇಶವನ್ನು ಸೀಮೆಎಣ್ಣೆ ಮುಕ್ತಗೊಳಿಸುವ ಅಂಗವಾಗಿ ಸೀಮೆಎಣ್ಣೆ ವಿತರಣೆಯನ್ನು ನಿಲ್ಲಿಸಲಾಗಿತ್ತು. ಆದರೆ, ಜನರ ಭಾವನೆ ಮತ್ತು ಬೇಡಿಕೆ ಅರ್ಥ ಮಾಡಿಕೊಂಡು ವಿದ್ಯುತ್ ಕೊರತೆಯಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ತಿಂಗಳಿಗೆ 1ಲೀಟರ್ ಮಾತ್ರ ಸೀಮೆಎಣ್ಣೆ ವಿತರಿಸಲಾಗುತ್ತಿದೆ ಎಂದರು.

ಅಶಕ್ತರು, ನಿರ್ಗತಿಕರು, ಅಂಗವಿಕಲರಿಗೆ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತಹ ಸಂಸ್ಥೆಗಳಿಗೆ ದಾಸೋಹ ಯೋಜನೆಯಡಿ ಅಕ್ಕಿ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 16 ಸಂಸ್ಥೆಗಳು ಅಕ್ಕಿಯನ್ನು ಪಡೆದುಕೊಳ್ಳುತ್ತಿವೆ. 583 ಜನರಿಗೆ ಇದರ ಉಪಯೋಗ ಸಿಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 24 ಸಾವಿರ ಕ್ವಿಂಟಾಲ್ ಗೋದಿ ಮುಗ್ಗಲು ಹಿಡಿದ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿದೆ. ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರೆ ಈ ಸಮಸ್ಯೆಯಾಗುತ್ತಿರಲಿಲ್ಲ.

ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು, ವರದಿ ಅನ್ವಯ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್, ಕಾಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.