ADVERTISEMENT

ದಂಡಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಬದ್ಧ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 9:42 IST
Last Updated 4 ಸೆಪ್ಟೆಂಬರ್ 2017, 9:42 IST

ಆನವಟ್ಟಿ: ‘ಶಾಸಕ ಮಧು ಬಂಗಾರಪ್ಪ ದಂಡಾವತಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಬಿಡಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಬಿಜೆಪಿಯು ಈ ಯೋಜನೆಗೆ ಆದ್ಯತೆ ನೀಡುತ್ತಿದ್ದು, ಇದರ ಅನುಷ್ಠಾನಕ್ಕೆ ಬದ್ಧವಾಗಿದೆ’ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ದ್ವಾರಳ್ಳಿ ತಿಳಿಸಿದರು. ತಾಲ್ಲೂಕಿನ ನೀರಾವರಿ ಕುರಿತು ಸಂಸದ ಬಿ.ವೈ.ಯಡಿಯೂರಪ್ಪ ಅವರ ಜತೆ ಚರ್ಚಿಸಲು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸತತ ಬರಗಾಲದಿಂದ ರೈತ ಚಿಂತೆಗೀಡಾಗಿದ್ದಾನೆ. ಪ್ರಾಣಿ–ಪಕ್ಷಿಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಕೂಲಿ ಕಾರ್ಮಿಕರು ಜೀವನೋಪಾಯಕ್ಕೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದೆ’ ಎಂದು ಹೇಳಿದರು.

ಮೂಡಿ–ಕುಣೆತೆಪ್ಪ, ಮೂಗೂರು ಏತ ನೀರಾವರಿ ಅನುಷ್ಠಾನವಾಗಿದೆ. ಕಚ್ಚವಿ ಏತ ನೀರಾವರಿಗೆ ಅನುಮೋದನೆ ಸಿಕ್ಕಿದ್ದರೂ ಕೆಲಸ ಆಗುತ್ತಿಲ್ಲ ಎಂದು ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಯಡಿಯೂರಪ್ಪ ಅವರು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರನ್ನು ಭೇಟಿಯಾಗಿ ಮೂಡಿ ಕುಣೆತೆಪ್ಪ ಏತ ನೀರಾವರಿ ಯೋಜನೆ ಬಗ್ಗೆ ಗಮನ
ಸೆಳೆದಿದ್ದರು. ಇದರಿಂದ ಸೊರಬ ತಾಲ್ಲೂಕಿನ ರೈತರಿಗೆ ಹಾಗೂ ಪಕ್ಕದ ತಾಲ್ಲೂಕಿನ ಗ್ರಾಮದ ರೈತರಿಗೆ ಅನುಕೂಲ ಆಗಲಿದೆ ಎಂದು ವಿವರಿಸಿದ್ದರು. ಯೋಜನೆ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ್‌ ಹೇಳಿದರು.

ಮೂಗೂರು ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದು, ಇದರಿಂದ 13 ಗ್ರಾಮ ಹಾಗೂ 87 ಕೆರೆಗಳಿಗೆ ನೀರು ತುಂಬಿಸುವ ಸಾಮರ್ಥ್ಯವಿದೆ. ಇದಕ್ಕೆ ಹಣವೂ ಬಿಡುಗಡೆ ಆಗಿದೆ. ರಾಜಕೀಯ ಕಾರಣಗಳಿಗಾಗಿ ಈಗ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಾಗಿ ಮೂಡಿ ಏತ ನೀರಾವರಿ ಜ‌ತೆಗೆ ಮೂಗುರು ಏತ ನೀರಾವರಿ ಸಮೀಕ್ಷೆ ಮಾಡಿ ಕಾಮಗಾರಿಗೆ ಹಣ ನೀಡುವಂತೆ ಒತ್ತಾಯಿಸಲು ಶೀಘ್ರದಲ್ಲೇ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇವೆ ಎಂದು ಮಂಜಪ್ಪ ಮರದರ್‌ ತಿಳಿಸಿದರು.

ಈಗಾಗಲೇ ಹೊಳೆಯಲ್ಲಿ ನೀರು ಕಡಿಮೆಯಾಗುತ್ತಿದೆ. ರೈತರ ಹಿತಕ್ಕಾಗಿ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಬೇಕಾಗಿರುವುದರಿಂದ ಎಲ್ಲಾ ಬ್ಯಾರೇಜ್‌ಗಳ ಗೇಟು ಬೇಗ ಹಾಕಿಸಬೇಕು ಎಂದು ಬಸವನಗೌಡ ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಬಸವರಾಜಪ್ಪ, ರೇವಣಪ್ಪ, ಉಮೇಶ ಉಡುಗಣಿ, ಮಂಜುನಾಥ, ದಯಾನಂದ ನೇರಲಗಿ, ಕೆರೆಯಪ್ಪ, ಚಂದ್ರಪ್ಪ, ವೀರನಗೌಡ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.