ADVERTISEMENT

‘ಧರ್ಮಗ್ರಂಥದ ಆಧಾರದಲ್ಲಿ ಆಡಳಿತ ನಡೆಯಲ್ಲ’

ತೀರ್ಥಹಳ್ಳಿ: ಕಿಮ್ಮನೆ ನೇತೃತ್ವದ ಜನಜಾಗೃತಿ ಪಾದಯಾತ್ರೆ, ಸಮಾವೇಶದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಭಾಗಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:50 IST
Last Updated 22 ಮಾರ್ಚ್ 2018, 12:50 IST

ತೀರ್ಥಹಳ್ಳಿ: ‘ಮನುಸ್ಮೃತಿ ಜಾರಿಗೆ ಬಂದಿದ್ದರೆ ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳಾಗಿ ಮಾತ್ರ ಉಳಿಯುತ್ತಿದ್ದರು. ಆರ್‌ಎಸ್‌ಎಸ್‌, ಬಿಜೆಪಿಯವರಿಗೆ ಸಮಾನತೆಯ ಮೇಲೆ ನಂಬಿಕೆ ಇಲ್ಲ. ಸಂವಿಧಾನವನ್ನು ಸುಟ್ಟ ಖ್ಯಾತಿ ಅವರದ್ದು’ ಎಂದು ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯಪಟ್ಟರು.

ತೀರ್ಥಹಳ್ಳಿಯ ಸಂಸ್ಕೃತಿ ಮಂದಿರದ ಆವರಣದಲ್ಲಿ ಶಾಸಕ ಕಿಮ್ಮನೆ ರತ್ನಾಕರ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಬುಧವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ವರ್ಗದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಬರೆದ ಸಂವಿಧಾನದ ಮೇಲೆ ಆಡಳಿತ ನಿಂತಿದೆ. ಯಾವುದೇ ಧರ್ಮಗ್ರಂಥದ ಆಧಾರದಲ್ಲಿ ಆಡಳಿತ ನಡೆಯುತ್ತಿಲ್ಲ. ಸಂವಿಧಾನವನ್ನು ಬದಲು ಮಾಡಲು ಬಂದಿದ್ದೇವೆ ಎನ್ನುವವರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ. ಅವರಿಗೆ ಸಮಾನತೆ, ದೀನ ದಲಿತರ ಬಗ್ಗೆ ತಿಳಿವಿನ ಕೊರತೆ ಇದೆ. ಮಹಿಳೆಯರನ್ನು ಶಕ್ತರನ್ನಾಗಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಅಂಬೇಡ್ಕರ್ ಕೇವಲ ಸಂವಿಧಾನ ತಜ್ಞರು ಮಾತ್ರವಲ್ಲ, ಆರ್ಥಿಕ ತಜ್ಞರೂ ಆಗಿದ್ದರು’ ಎಂದು ಪ್ರಿಯಾಂಕ ಖರ್ಗೆ ಹೇಳಿದರು.

ADVERTISEMENT

ಬುದ್ಧ, ಬಸವ, ಅಂಬೇಡ್ಕರ್‌ ತತ್ವದ ಆಧಾರದ ಮೇಲೆ ಸಮಾನತೆ ನೀಡುವ ಕೆಲಸ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ರಾಜ್ಯ ಬಜೆಟ್‌ನಲ್ಲಿ ₹ 29 ಸಾವಿರ ಕೋಟಿ ಮೀಸಲಿಡಲಾಗಿದೆ. ನರೇಂದ್ರ ಮೋದಿ ಸರ್ಕಾರ ಇಡೀ ದೇಶಕ್ಕೆ ಅನ್ವಯ ಆಗುವಂತೆ ₹ 49 ಸಾವಿರ ಕೋಟಿ ಹಣ ಇಟ್ಟಿದ್ದಾರೆ. ಇದೇ ಏನು ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಎಂದು ಪ್ರಶ್ನಿಸಿದರು.

‘ನಾವು ಗಾಂಧೀಜಿಯವರನ್ನು ಪೂಜೆ ಮಾಡಿದರೆ, ಬಿಜೆಪಿಯವರು ಗೋಡ್ಸೆಯನ್ನು ಪೂಜಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳಬೇಕು ಎಂದು ಕೆ.ಎಸ್‌.ಈಶ್ವರಪ್ಪ ಹೇಳುತ್ತಾರೆ. ನಮೋ ಅಂದ್ರೆ ನಮಗೆ ಮೋಸ ಎಂದರ್ಥ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು, ರೈತರ ಆದಾಯ ಹೆಚ್ಚಿಸುವುದಾಗಿ ಹೇಳಿದರು. ಯಾವುದೂ ಆಗಲಿಲ್ಲ. ಇವರ ಆಡಳಿತದಲ್ಲಿ ಉಳಿತಾಯದ ಹಣ ಬ್ಯಾಂಕಿನಲ್ಲಿ ಇಟ್ರೆ ನೀರವ್‌ ಮೋದಿ ತೆಗೆದುಕೊಂಡು ಹೋಗ್ತಾರೆ, ಮನೇಲಿ ಇಟ್ರೆ ಮೋದಿ ತೆಗೆದುಕೊಂಡು ಹೋಗ್ತಾರೆ’ ಎಂದು ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀನಾ.ಶ್ರೀನಿವಾಸ್‌ ಮಾತನಾಡಿ, ‘ಅಂಬೇಡ್ಕರ್‌ ಕೇವಲ ದಲಿತ ಸಮುದಾಯದ ನಾಯಕರಲ್ಲ. ದೇಶದ ನಾಯಕರು. ಅವರು ಯಾವುದೇ ಜಾತಿ,
ಧರ್ಮಕ್ಕೆ ಸೇರಿದವರಲ್ಲ. ಅವರ ಆಶಯಗಳನ್ನು ಮೈಗೂಡಿಸಿಕೊಂಡು ಮೀಸಲಾತಿಯನ್ನು ಕಾಂಗ್ರೆಸ್‌ ಜಾರಿಗೊಳಿಸಿದೆ’ ಎಂದರು.

ಬಿಜೆಪಿ ಮೀಸಲಾತಿ ವಿರೋಧಿಯಾಗಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ವಿರೋಧಿಸುವವರು ಈ ದೇಶದಲ್ಲಿ ಉಳಿಯಲು ಸಾಧ್ಯವಿಲ್ಲ. ಅಮಿತ್‌ ಶಾ ಅಪ್ಪಟ ವ್ಯಾಪಾರಿಯಾಗಿದ್ದು, ಅವರಿಗೆ ರೈತರ ಕಷ್ಟ ಗೊತ್ತಿಲ್ಲ ಎಂದು ಶ್ರೀನಿವಾಸ್‌ ಟೀಕಿಸಿದರು.

ಶಾಸಕ ಕಿಮ್ಮನೆ ರತ್ನಾಕರ ಅವರು ಮಾತನಾಡಿ, ‘ಡಿಸಿಸಿ ಬ್ಯಾಂಕ್‌ ಹಗರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದ್ದೇನೆ. ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಕುರಿತು ಸಣ್ಣ ದಾಖಲೆ ಒದಗಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುತ್ತೇನೆ. ಪಾದಯಾತ್ರೆ ನಾಟಕ ಅಲ್ಲ. ಚುನಾವಣೆಗೆ ನಾಟಕ ಮಾಡಬೇಕಾದ ಅಗತ್ಯವಿಲ್ಲ. ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಜನಜಾಗೃತಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಕ್ಷೇತ್ರದ ಕಡೆಗೆ ತಿರುಗಿ ನೋಡುವಂಥ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಧರ್ಮ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿಲ್ಲ. ದಲಿತರ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದೇನೆ’ ಎಂದು ಹೇಳಿದರು.

ಬಿ.ಎಸ್‌ ಪುರುಷೋತ್ತಮ್‌, ಆರ್‌.ಪ್ರಸನ್ನಕುಮಾರ್‌, ಆಗಾ ಸುಲ್ತಾನ್‌ವೇದಾ ವಿಜಯಕುಮಾರ್‌, ಯಲ್ಲಪ್ಪ, ಕೆಸ್ತೂರ್‌ ಮಂಜುನಾಥ್‌ ಮಾತನಾಡಿದರು. ಪಕ್ಷದ ಮುಡುಬ ರಾಘವೇಂದ್ರ, ಜಿ.ಎಸ್‌.ನಾರಾಯಣರಾವ್‌, ಪ್ರಭಾವತಿ ಶಾಮಣ್ಣ, ಕಲಗೋಡು ರತ್ನಾಕರ, ಕೇಳೂರು ಮಿತ್ರ, ಯಡೂರು ರಾಜಾರಾಮ್‌, ಬಿ.ಪಿ.ರಾಮಚಂದ್ರ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.